“ಪ್ರಜ್ಞಾಪೂರ್ವಕ ನಿರ್ಧಾರ” : ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಬಳಿಕ ಸಿ.ವಿ. ಆನಂದ ಬೋಸ್ ಮೊದಲ ಪ್ರತಿಕ್ರಿಯೆ
“ಸೂಕ್ತ ಸಮಯ ಬರುವವರೆಗೂ ರಾಜೀನಾಮೆ ಹಿಂದಿನ ಕಾರಣ ಗೌಪ್ಯವಾಗಿರಲಿವೆ”
Photo/ANI
ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ತಮ್ಮ ರಾಜೀನಾಮೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ರಾಜೀನಾಮೆಯು "ಪ್ರಜ್ಞಾಪೂರ್ವಕ" ನಿರ್ಧಾರವಾಗಿತ್ತು ಎಂದು ಹೇಳಿದ್ದಾರೆ. ‘ಸೂಕ್ತ ಸಮಯ ಬರುವವರೆಗೂ ರಾಜೀನಾಮೆ ಹಿಂದಿನ ಕಾರಣಗಳು ಗೌಪ್ಯವಾಗಿರಲಿವೆ’ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಲು ಕಾರಣವೇನೆಂದು ಕೇಳಿದಾಗ, ಬೋಸ್ ಕ್ರಿಕೆಟ್ ಅನ್ನು ಉಲ್ಲೇಖಿಸುವ ಮೂಲಕ ತಮ್ಮ ನಿರ್ಧಾರವನ್ನು ವಿವರಿಸಿದರು. ಅಧಿಕಾರಾವಧಿಯನ್ನು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ನಂಬಿರುವುದಾಗಿ ಹೇಳಿದರು.
"ಎಲ್ಲಿ ಪ್ರವೇಶವಿದೆಯೋ ಅಲ್ಲಿ ನಿರ್ಗಮನವೂ ಇರುತ್ತದೆ. ನಾನು ಇಲ್ಲಿ ಗವರ್ನರ್ ಆಗಿ 1,200 ದಿನಗಳನ್ನು ಪೂರ್ಣಗೊಳಿಸಿದ್ದೇನೆ. ಅಂದರೆ ಕ್ರಿಕೆಟ್ ಪರಿಭಾಷೆಯಲ್ಲಿ 12 ಶತಕಗಳು. ಅದು ಸಾಕು. ಯಾವಾಗ ನಿಲ್ಲಬೇಕು ಎಂಬುದಕ್ಕೂ ಒಂದು ಸಮಯ ಇರುತ್ತದೆ. ನಿರ್ಗಮನಕ್ಕೆ ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ" ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಸಿ.ವಿ. ಆನಂದ ಬೋಸ್ ಅವರು ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಆರ್.ಎನ್. ರವಿ ಅವರನ್ನು ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.