Delhi | ಹೂಡಿಕೆದಾರರ ಹಣವನ್ನು 9 ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾರು ಖರೀದಿಸಲು ಬಳಸಿದ ಉದ್ಯಮಿಯ ಬಂಧನ
ಸಾಂಧರ್ಭಿಕ ಚಿತ್ರ/ NDTV
ಹೊಸದಿಲ್ಲಿ: ಉದ್ಯಮಿಯೊಬ್ಬರು ಹೂಡಿಕೆದಾರರ ಹಣವನ್ನು ಸಂಕೀರ್ಣ ವಹಿವಾಟುಗಳ ಮೂಲಕ 9 ಕೋಟಿ ರೂ. ಮೌಲ್ಯದ ಬೆಂಟ್ಲಿ ಬೆಂಟೇಗಾ ಕಾರು ಸೇರಿದಂತೆ ಐಷಾರಾಮಿ ವಾಹನಗಳ ಖರೀದಿಗೆ ಬಳಸಿಕೊಂಡಿದ್ದು, ಆತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕಿಂಗೇತರ ಹಣಕಾಸು ಕಂಪೆನಿಯಾದ ‘ಎಕ್ಸ್‌ಕ್ಲೂಸಿವ್ ಕ್ಯಾಪಿಟಲ್ ಲಿಮಿಟೆಡ್’ ಸಂಸ್ಥೆಯ ಮಾಲಕ ಸತ್ಯ ಪ್ರಕಾಶ್ ಬಾಗ್ಲಾ ಎಂಬಾತನನ್ನು ದಿಲ್ಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕ ಶುಕ್ರವಾರ ಬಂಧಿಸಿದೆ. ಶನಿವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
‘ಎಕ್ಸ್‌ಕ್ಲೂಸಿವ್ ಕ್ಯಾಪಿಟಲ್ ಲಿಮಿಟೆಡ್’ ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಅದರ ಮಾಲಕ ಬಾಗ್ಲಾ ನಮ್ಮನ್ನು ದಾರಿ ತಪ್ಪಿಸಿದ್ದಾರೆ ಎಂದು ಹಿರಿಯ ವಯಸ್ಸಿನ ದಂಪತಿಗಳು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ, ಬಾಗ್ಲಾ ಹಾಗೂ ಆತನ ಸಹಚರರು ಮಧ್ಯಾವಧಿಯಲ್ಲೇ ತಮ್ಮ ಹಾಗೂ ಇತರ ಹೂಡಿಕೆದಾರರ ಹಣವನ್ನು ಹಿಂಪಡೆದು, ಅದನ್ನು ಐಷಾರಾಮಿ ಕಾರುಗಳ ಖರೀದಿಗೆ ಹಾಗೂ ತಮ್ಮದೇ ಸಂಸ್ಥೆಗಳಿಗೆ ಅಸ್ಥಿರ ಸಾಲ ನೀಡಲು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಆರೋಪಿ ಸತ್ಯ ಪ್ರಕಾಶ್ ಬಾಗ್ಲಾನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ನ್ಯಾಯಾಲಯ, “ಆರೋಪಿ ಉದ್ದೇಶಪೂರ್ವಕವಾಗಿ ವಾಸ್ತವ ಸಂಗತಿಗಳನ್ನು ಮುಚ್ಚಿಟ್ಟಿದ್ದು, ವಿಚಾರಣೆ ಹಾಗೂ ತನಿಖೆಯ ಸಂದರ್ಭದಲ್ಲಿ ಪೂರ್ಣ ವಿವರಗಳನ್ನು ನೀಡುವುದನ್ನು ತಪ್ಪಿಸಿಕೊಂಡಿದ್ದಾನೆ. ತನಿಖೆಗೆ ಸಹಕರಿಸಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಸತ್ಯ ಪ್ರಕಾಶ್ ಬಾಗ್ಲಾ ನಡೆಸುತ್ತಿರುವ ‘ಲಕ್ಸಸ್ ರಿಟೈಲ್ ಪ್ರೈ. ಲಿ.’ ಸೇರಿದಂತೆ ಇತರ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ತಿಳಿಯಲು ಹಾಗೂ ಬೆಂಟ್ಲಿ ಬೆಂಟೇಗಾ ಕಾರಿನ ಅಂತಿಮ ಬಳಕೆದಾರರು ಯಾರು ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಆತನನ್ನು ಮುಂಬೈಗೆ ಕರೆದೊಯ್ಯಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.