ಲೈಂಗಿಕ ಕಿರುಕುಳದ ಮೂರನೇ ಪ್ರಕರಣ | ಕಾಂಗ್ರೆಸ್ ನ ಉಚ್ಛಾಟಿತ MLA ರಾಹುಲ್ ಮಾಂಕ್ಕೂಟತ್ತಿಲ್ ಬಂಧನ
pc : timesofindia
ತಿರುವನಂತಪುರ, ಜ. 11: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನ ಉಚ್ಛಾಟಿತ MLA ರಾಹುಲ್ ಮಾಂಕ್ಕೂಟತ್ತಿಲ್ ಅವರನ್ನು ಬಂಧಿಸಲಾಗಿದೆ.
ಅವರನ್ನು ಪಾಲಕ್ಕಾಡ್ ನಲ್ಲಿ ರವಿವಾರ ಮುಂಜಾನೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವರನ್ನು ಸೋಮವಾರ ಮುಂಜಾನೆ ಇಲ್ಲಿನ ಪೊಲೀಸ್ ಕಸ್ಟಡಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ತನಂತಿಟ್ಟ ನಿವಾಸಿಯೊಬ್ಬರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಪಾಲಕ್ಕಾಡ್ MLAನ ವಿರುದ್ಧ ಇತ್ತೀಚೆಗೆ ಮೂರನೇ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಕೆನಡಾದಲ್ಲಿರುವ ಸಂತ್ರಸ್ತೆ ಪೊಲೀಸರಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ, ದೂರುದಾರರು ವಿವಾಹಿತ ಮಹಿಳೆಯಾಗಿದ್ದು, ಅವರ ವೈವಾಹಿಕ ಜೀವನದ ಸಮಸ್ಯೆಗಳ ಹಿನ್ನೆಲೆಯಲ್ಲಿ ಮಾಂಕ್ಕೂಟತ್ತಿಲ್ ಅವರ ಪರಿಚಯವಾಗಿದೆ.
ವಿವಾಹವಾಗುವುದಾಗಿ ನಂಬಿಸಿ ಮಾಂಕ್ಕೂಟತ್ತಿಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆಕೆ ಗರ್ಭಿಣಿಯಾದಾಗ, ಮಾಂಕ್ಕೂಟತ್ತಿಲ್ ಆಕೆಯ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಸಂದರ್ಭಗಳಲ್ಲಿ ಮಾಂಕ್ಕೂಟತ್ತಿಲ್ ತನ್ನಿಂದ ಹಣ ಪಡೆದುಕೊಂಡಿದ್ದಾರೆ ಎಂದು ಮಹಿಳೆ ಪ್ರತಿಪಾದಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಪೊಲೀಸರು ಮಾಂಕ್ಕೂಟತ್ತಿಲ್ ಅವರ ಮೇಲೆ ಕಣ್ಗಾವಲು ಇರಿಸಿದ್ದರು. ನಂತರ ಉಪ ಎಸ್ಪಿ ನೇತೃತ್ವದ ಆರು ಸದಸ್ಯರ ತಂಡ ಮಾಂಕ್ಕೂಟತ್ತಿಲ್ ತಂಗಿದ್ದ ಹೊಟೇಲ್ ಗೆ ಮುಂಜಾನೆ 12.45ಕ್ಕೆ ತಲುಪಿತು ಎಂದು ಮೂಲಗಳು ತಿಳಿಸಿವೆ.
ಹೊಟೇಲ್ ನಿಂದ ಅವರನ್ನು ತಡರಾತ್ರಿ 1 ಗಂಟೆಗೆ ವಶಕ್ಕೆ ತೆಗೆದುಕೊಳ್ಳಲಾಯಿತು. ಮುಂಜಾನೆ ಸುಮಾರು 5.30ಕ್ಕೆ ಪತ್ತನಂತಿಟ್ಟದಲ್ಲಿರುವ ಪೊಲೀಸ್ ಕಸ್ಟಡಿಗೆ ಸ್ಥಳಾಂತರಿಸಲಾಯಿತು. ಅವರ ವಿರುದ್ಧ ಇದೇ ರೀತಿಯ ಎರಡು ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಇತ್ತೀಚಿನ ಪ್ರಕರಣದ ತನಿಖೆಯ ಜವಾಬ್ದಾರಿಯನ್ನೂ ನೀಡಲಾಗಿದೆ.