Jammu & Kashmir | ವೈದ್ಯರಾಗುವ ವಿದ್ಯಾರ್ಥಿಗಳ ಕನಸುಗಳಿಗೆ ಕೊಳ್ಳಿಯಿಟ್ಟ ಕತ್ರಾದ ವೈಷ್ಣೋದೇವಿ ಕಾಲೇಜಿನ MBBS ಕೋರ್ಸ್ ರದ್ದತಿ
pc:indianexpress
ಜಮ್ಮು, ಜ.11: ಜಮ್ಮು–ಕಾಶ್ಮೀರದ ಕತ್ರಾದ ಶ್ರೀ ಮಾತಾ ವೈಷ್ಣೋದೇವಿ ಮೆಡಿಕಲ್ ಕಾಲೇಜಿಗೆ 2025–26ನೇ ಶೈಕ್ಷಣಿಕ ವರ್ಷಕ್ಕೆ MBBS ಕೋರ್ಸ್ ನಡೆಸಲು ನೀಡಿದ್ದ ಅನುಮತಿಯನ್ನು ಮೂಲಸೌಕರ್ಯಗಳ ಗಂಭೀರ ಕೊರತೆಯನ್ನು ಉಲ್ಲೇಖಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ಈ ವಾರದ ಆರಂಭದಲ್ಲಿ ಹಿಂದೆಗೆದುಕೊಂಡಿದೆ. ಈ ನಿರ್ಧಾರ ವೈದ್ಯರಾಗುವ ಕನಸುಗಳನ್ನು ಹೊತ್ತಿದ್ದ ವಿದ್ಯಾರ್ಥಿಗಳನ್ನು ಹತಾಶೆಗೆ ತಳ್ಳಿದೆ.
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ತಜ್ಞರ ತಂಡವೊಂದು ನಡೆಸಿದ ವಿವರವಾದ ಪರಿಶೀಲನೆಯ ಬಳಿಕ ಎನ್ಎಂಸಿ 50 ವಿದ್ಯಾರ್ಥಿಗಳನ್ನು MBBS ಕೋರ್ಸ್ಗೆ ಸೇರಿಸಿಕೊಳ್ಳಲು ಕಾಲೇಜಿಗೆ ಅನುಮತಿ ನೀಡಿತ್ತು. 50 ವಿದ್ಯಾರ್ಥಿಗಳ ಪೈಕಿ 44 ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದು, ಅವರ ನೀಟ್ ರ್ಯಾಂ ಕಿಂಗ್ ಗಳ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗಿತ್ತು. ಇದು ಆರೆಸ್ಸೆಸ್ ಪರ ಮತ್ತು ಬಿಜೆಪಿ ಪರ ಗುಂಪುಗಳಿಂದ ಪ್ರತಿಭಟನೆಗೆ ಕಾರಣವಾಗಿತ್ತು.
ಹೆಚ್ಚಿನ ವಿದ್ಯಾರ್ಥಿಗಳು ಕಾಶ್ಮೀರ ಕಣಿವೆಯ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ. ಅನುಮತಿ ರದ್ದುಗೊಳಿಸಿದ್ದರೂ ವಿದ್ಯಾರ್ಥಿಗಳಿಗೆ ಜಮ್ಮು–ಕಾಶ್ಮೀರದಲ್ಲಿನ ಇತರ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲಾಗುವುದು ಎಂದು ಸರಕಾರ ಹೇಳಿದೆ. ಆದರೆ, ‘ವೈಷ್ಣೋದೇವಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ ಈಗಾಗಲೇ ಎರಡು ತಿಂಗಳು ವಿಳಂಬವಾಗಿ ಆರಂಭಗೊಂಡಿತ್ತು. ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಒಂದೆರಡು ತಿಂಗಳುಗಳು ತೆಗೆದುಕೊಂಡರೆ ನಾವು ಮೊದಲ ವರ್ಷದಲ್ಲೇ ತುಂಬ ಹಿಂದೆ ಬೀಳುತ್ತೇವೆ’ ಎಂದು ಅನೇಕ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
‘ಪ್ರಾದೇಶಿಕ ಮತ್ತು ಧಾರ್ಮಿಕ ವಿಭಜನೆಗಳ ಕುರಿತು ಪ್ರತಿಭಟನೆಗಳು ಕ್ಯಾಂಪಸ್ ಗೇಟ್ಗಳವರೆಗೆ ತಲುಪಿದ್ದರೂ, ನಮ್ಮ ಹಾಸ್ಟೆಲ್ಗಳು ಮತ್ತು ತರಗತಿ ಕೋಣೆಗಳಲ್ಲಿ ಓದನ್ನು ಹೊರತುಪಡಿಸಿ ಧರ್ಮ ಸೇರಿದಂತೆ ಬೇರೆ ಯಾವುದರ ಬಗ್ಗೆಯೂ ಚರ್ಚೆಗಳು ನಡೆದಿರಲಿಲ್ಲ. ವೈದ್ಯಕೀಯ ಒಂದು ಕಠಿಣ ಕೋರ್ಸ್ ಆಗಿದ್ದು, ಅದು ಪ್ರತಿ ವಿದ್ಯಾರ್ಥಿಯಿಂದಲೂ ಸಂಪೂರ್ಣ ಗಮನವನ್ನು ಅಗತ್ಯಪಡಿಸುತ್ತದೆ’ ಎಂದು ಜಮ್ಮುವಿನಿಂದ ಏಕೈಕ ಮುಸ್ಲಿಂ ವಿದ್ಯಾರ್ಥಿನಿಯಾದ ಮಿಸ್ಬಾ ಹೇಳಿದರು.
ಶುಕ್ರವಾರ ಅಪರಾಹ್ನ ಎರಡು ಗಂಟೆಯೊಳಗೆ ಕ್ಯಾಂಪಸ್ ತೊರೆಯುವಂತೆ ಕಾಲೇಜಿನ ಅಧಿಕಾರಿಗಳ ಸೂಚನೆಯ ಮೇರೆಗೆ ಸಂಸ್ಥೆಯ ಮೊದಲ ಬ್ಯಾಚ್ ನ MBBS ವಿದ್ಯಾರ್ಥಿಗಳು ಕಣ್ಣೀರಿನ ವಿದಾಯ ಹೇಳಿ ತಮ್ಮ ಮನೆಗಳಿಗೆ ಮರಳಿದರು.
ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ನಿರ್ಗಮಿಸುವ ಮುನ್ನ ಅವರನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರು, ಇಡೀ ಬೆಳವಣಿಗೆ ದುರದೃಷ್ಟಕರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮ್ಮು–ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, 50 ವಿದ್ಯಾರ್ಥಿಗಳಿಗೆ ಇತರ ಕಾಲೇಜುಗಳಲ್ಲಿ ಪ್ರವೇಶ ಒದಗಿಸುವುದು ಸರಕಾರಕ್ಕೆ ಸಮಸ್ಯೆಯಲ್ಲ ಎಂದು ಹೇಳಿದರೂ, ವೈಷ್ಣೋದೇವಿ ಮೆಡಿಕಲ್ ಕಾಲೇಜಿನ ಮುಚ್ಚುವಿಕೆಯಿಂದ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಉಂಟಾಗುವ ಹಾನಿಗೆ ಯಾರನ್ನಾದರೂ ಹೊಣೆಯಾಗಿಸಬೇಕು ಎಂದು ಆಗ್ರಹಿಸಿದರು.