×
Ad

Madhya Pradesh | ಇಂದೋರ್ ದುರಂತ: ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆ; ಕಾಂಗ್ರೆಸ್ನಿಂದ ಪ್ರತಿಭಟನಾ ರ್ಯಾಲಿ

Update: 2026-01-11 21:12 IST

PC : ndtv

ಇಂದೋರ್, ಜ. 11: ಇಂದೋರ್ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಹೊಣೆಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಹಾಗೂ ಘಟನೆಯ ಜವಾಬ್ದಾರಿ ವಹಿಸುವಂತೆ ಆಗ್ರಹಿಸಿ ಮಧ್ಯಪ್ರದೇಶ ಕಾಂಗ್ರೆಸ್ ರವಿವಾರ ‘ನ್ಯಾಯಕ್ಕಾಗಿ ಯಾತ್ರೆ’ ನಡೆಸಿತು.

‘ನ್ಯಾಯಕ್ಕಾಗಿ ಯಾತ್ರೆ’ ಬಡಾ ಗಣಪತಿ ಚೌಕದಿಂದ ಆರಂಭವಾಗಿ ರಾಜವಾಡದಲ್ಲಿ ಸಮಾಪನಗೊಂಡಿತು. ಕಾಂಗ್ರೆಸ್ ನ ಹಿರಿಯ ನಾಯಕರು, ಪಕ್ಷದ ಕಾರ್ಯಕರ್ತರು ಹಾಗೂ ನಿವಾಸಿಗಳು ಪಾಲ್ಗೊಂಡರು. ಈ ಯಾತ್ರೆಯ ನೇತೃತ್ವ ವಹಿಸಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಇಂದೋರ್ ಮೇಯರ್, ಬಿಜೆಪಿ ಸರಕಾರ ಹಾಗೂ ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ದುರಂತಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು.

‘ನ್ಯಾಯಕ್ಕಾಗಿ ಯಾತ್ರೆ’ಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ಜಿತು ಪಟ್ವಾರಿ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಪ್ರತಿಪಕ್ಷದ ನಾಯಕ ಉಮಂಗ್ ಸಿಂಘರ್, ಮಾಜಿ ಸಚಿವ ಸಜ್ಜನ್ ವರ್ಮಾ, ಮಧ್ಯಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹರೀಷ್ ಚೌಧುರಿ, ಅಜಯ್ ಸಿಂಗ್ ಹಾಗೂ ಕಾಂಗ್ರೆಸ್ ಶಾಸಕರು, ಕಾರ್ಪೋರೇಟರ್ ಗಳು, ಸೇವಾದಳದ ಸದಸ್ಯರು ಮತ್ತು ಮಹಿಳಾ ಕಾಂಗ್ರೆಸ್ ನಾಯಕರು ಪಾಲ್ಗೊಂಡರು.

‘ನ್ಯಾಯಕ್ಕಾಗಿ ಯಾತ್ರೆ’ ನಡೆದ ಮಾರ್ಗದಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಯಾತ್ರೆಯ ವೇಳೆ ದಿಗ್ವಿಜಯ ಸಿಂಗ್ ಹಾಗೂ ಉಮಂಗ್ ಸಿಂಘರ್ ಅವರು ವಾಹನದ ಮೇಲೆ ನಿಂತು ಜನಸಂದಣಿಯನ್ನು ಉದ್ದೇಶಿಸಿ ಮಾತನಾಡಿದರು.

ಇಂದೋರ್ನಲ್ಲಿ ಕಾರ್ಪೋರೇಟರ್ ಗಳಿಂದ ಹಿಡಿದು ಸಂಸತ್ತಿನವರೆಗೆ ಎಲ್ಲ ಮಟ್ಟದ ಅಧಿಕಾರವನ್ನು ಬಿಜೆಪಿ ನಿಯಂತ್ರಿಸುತ್ತಿದೆ. ನ್ಯಾಯಕ್ಕಾಗಿ ಹೋರಾಟ ದೀರ್ಘವಾಗಿರುತ್ತದೆ. ಅಲ್ಲದೆ, ಜನರೊಂದಿಗೆ ಮಾತನಾಡಲು ಮನೆಮನೆಗೆ ತೆರಳಬೇಕಾಗುತ್ತದೆ ಎಂದು ದಿಗ್ವಿಜಯ ಸಿಂಗ್ ಹೇಳಿದರು.

ಸರಕಾರ ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಉಮಂಗ್ ಸಿಂಘರ್ ಆರೋಪಿಸಿದರು. ನಗರದ ಕೆಲವು ಭಾಗಗಳಲ್ಲಿ ಇನ್ನೂ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು. “ಇದುವರೆಗೆ 21 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಜವಾಬ್ದಾರರಾದವರು ಕೊಲೆಗಾರರು. ಅವರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News