ಜಾಮೀನು ನೀಡಿದರೆ ಅಪರಾಧದಲ್ಲಿ ತೊಡಗಬಹುದು ಎಂಬ ಆತಂಕವಷ್ಟೇ ಮುನ್ನೆಚ್ಚರಿಕೆ ಬಂಧನಕ್ಕೆ ಆಧಾರವಲ್ಲ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ (Photo: PTI)
ಹೊಸದಿಲ್ಲಿ, ಜ. 11: ಬಂಧಿತ ವ್ಯಕ್ತಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರೆ ಆತ/ಆಕೆ ಮತ್ತೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಅಂತಹುದೇ ಅಪರಾಧಗಳಲ್ಲಿ ತೊಡಗಬಹುದು ಎಂಬ ಆತಂಕವಷ್ಟೇ ಮುನ್ನೆಚ್ಚರಿಕೆ ಬಂಧನಕ್ಕೆ ಆದೇಶಿಸಲು ಸಮಂಜಸ ಕಾರಣವಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದುರ್ಕರ್ ಅವರ ಪೀಠವು ಹೈದರಾಬಾದ್ ಮೂಲದ ಮಹಿಳೆಯೊಬ್ಬಳ ವಿರುದ್ಧದ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ತಳ್ಳಿಹಾಕಿತು. ಆಕೆಯನ್ನು 1986ರ ತೆಲಂಗಾಣ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆಯಡಿ ‘ಮಾದಕ ದ್ರವ್ಯ ಅಪರಾಧಿ’ ಎಂದು ಗುರುತಿಸಲಾಗಿತ್ತು.
ಮಹಿಳೆಯ ಚಟುವಟಿಕೆಗಳಿಂದ ಸಾರ್ವಜನಿಕ ಸುವ್ಯವಸ್ಥೆಗೆ ಯಾವ ರೀತಿಯಲ್ಲಿ ಹಾನಿಯಾಗಿತ್ತು ಅಥವಾ ಹಾನಿಗೊಳಗಾಗುವ ಸಾಧ್ಯತೆಯಿದೆ ಎಂಬುದನ್ನು ಬಂಧನ ಆದೇಶದಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಪೀಠವು ಹೇಳಿತು.
ಹೀಗಾಗಿ ಬಂಧಿತೆಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರೆ ಆಕೆ ಮತ್ತೆ ಅಂತಹುದೇ ಅಪರಾಧಗಳಲ್ಲಿ ತೊಡಗಬಹುದು ಮತ್ತು ಅದು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಯನ್ನುಂಟು ಮಾಡಬಹುದು ಎಂಬ ಬಂಧನಾಧಿಕಾರಿಯ ಕೇವಲ ಆತಂಕವು ಮುನ್ನೆಚ್ಚರಿಕೆ ಬಂಧನಕ್ಕೆ ಸಮರ್ಪಕ ಆಧಾರವಾಗುವುದಿಲ್ಲ ಎಂದು ಪೀಠವು ತನ್ನ ಜ. 8ರ ಆದೇಶದಲ್ಲಿ ತಿಳಿಸಿದೆ.
ಬಂಧನಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಹೇಗಾದರೂ ಮಾಡಿ ಮಹಿಳೆಯನ್ನು ಬಂಧನದಲ್ಲಿರಿಸಲು ಉದ್ದೇಶಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕುಟುಕಿದ ಸರ್ವೋಚ್ಚ ನ್ಯಾಯಾಲಯವು, 2016ರಿಂದ 2023ರವರೆಗಿನ ಮಹಿಳೆಯ ನಡವಳಿಕೆಯನ್ನು ಗಮನಿಸಿದೆ. ಆಕೆ ಜಾಮೀನಿನ ಯಾವುದೇ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಬಂಧನಾಧಿಕಾರಿ ಭಾವಿಸಿದ್ದರೆ ಜಾಮೀನನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬಹುದಿತ್ತು. ಆದರೆ ಅದನ್ನು ಮಾಡಲಾಗಿಲ್ಲ ಎಂದು ಬೆಟ್ಟು ಮಾಡಿತು.