×
Ad

ಕಾಲ್ತುಳಿತದ ಘಟನೆಯನ್ನು ಮುಚ್ಚಿಡಲು ಯತ್ನಿಸಿದ್ದ ಕೇಂದ್ರ ಸರಕಾರ: ಟಿಎಂಸಿ ನಾಯಕರ ಆರೋಪ

Update: 2025-02-16 20:46 IST

PC : PTI

ಹೊಸದಿಲ್ಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತದ ಘಟನೆಯನ್ನು ಮುಚ್ಚಿಹಾಕಲು ಕೇಂದ್ರ ಸರಕಾರವು ಯತ್ನಿಸಿತ್ತೆಂದು ತೃಣಮೂಲ ಕಾಂಗ್ರೆಸ್ ನಾಯಕರು ರವಿವಾರ ಆಪಾದಿಸಿದ್ದಾರೆ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

‘‘ಭಾರತೀಯ ಪ್ರಜೆಗಳ ಪ್ರಾಣಗಳ ಸರಕಾರವು ಚೆಲ್ಲಾಟವಾಡುತ್ತಿದೆ’’ಯೆಂದು ಟಿಎಂಸಿಯ ರಾಜ್ಯಸಭಾಉಪನಾಯಕಿ ಸಾಗರಿಕಾ ಘೋಷ್ ಆಪಾದಿಸಿದ್ದಾರೆ. ದಿಲ್ಲಿಯಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

‘‘ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬಿಜೆಪಿ ಕಾಲ್ತುಳಿತ ಸಂಭವಿಸಿದ್ದನ್ನು ನಿರಾಕರಿಸಿದ್ದರು. ಆನಂತರ ಅದೊಂದು ವದಂತಿಯೆಂದು ಬಣ್ಣಿಸಿದರು. ಬಳಿಕ ಕೆಲವು ವ್ಯಕ್ತಿಗಳು ಗಾಯಗೊಂಡಿದ್ದಾರೆಂದು ಒಪ್ಪಿಕೊಂಡಿತು. ಬಳಿಕ ಬಿಜೆಪಿಯು ಕೆಲವೇ ಕೆಲವು ಮಂದಿ ಸಾವನ್ನಪ್ಪಿರುವ ಸಾಧ್ಯತೆಯಿದೆಯೆಂದು ಒಪ್ಪಿಕೊಂಡಿತು’’ ಎಂದು ಘೋಷ್ ಅವರು ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಆಘಾತಕಾರಿ ಕಾಲ್ತುಳಿತದಿಂದ ಮೋದಿ ಸರಕಾರದ ಬಣ್ಣ ಬಯಲಾಗಿದೆಯೆಂದು ಆಕೆ ಟೀಕಿಸಿದ್ದಾರೆ.

ಈ ದುರಂತಕ್ಕಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಘೋಷ್, ಘಟನೆಯನ್ನು ಮುಚ್ಚಿಹಾಕಲು ರೈಲ್ವೆ ಇಲಾಖೆ ಯತ್ನಿಸಿದೆಯೆಂದು ಆಪಾದಿಸಿದರು.

ಟಿಎಂಸಿ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಅವರು ಕೂಡಾ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, "ದುರ್ಘಟನೆ ಸಂಭವಿಸಿದ ಕೆಲವು ತಾಸುಗಳವರೆಗೂ ರೈಲ್ವೆ ಇಲಾಖೆಯು ಅದು ಕೇವಲ ವದಂತಿಯೆಂದು ಹೇಳುತ್ತಲೇ ಬಂದಿತ್ತು. ಆದರೆ ಮೃತದೇಹಗಳು ಮಾಧ್ಯಮಗಳಲ್ಲಿ ಕಾಣಿಸಲಾರಂಭಿಸುವರೆಗೂ ಅದು ಸುದ್ದಿಯನ್ನು ಮುಚ್ಚಿಹಾಕಲು ಯತ್ನಿಸಿತ್ತು’’ ಎಂದು ಅವರು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News