ಚಾಂಪಿಯನ್ಸ್ ಟ್ರೊಫಿ ನಡೆಯುವ ಕರಾಚಿ ಸ್ಟೇಡಿಯಮ್‌ನಲ್ಲಿ ಭಾರತದ ಧ್ವಜ ನಾಪತ್ತೆ?
PC : X
ಕರಾಚಿ : ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಆರಂಭಕ್ಕೆ ಮುನ್ನ ಹೊಸ ವಿವಾದವೊಂದು ತಲೆಯೆತ್ತಿದೆ. ಕರಾಚಿಯ ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ಭಾರತೀಯ ಧ್ವಜದ ಅನುಪಸ್ಥಿತಿಯನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಇತರ ದೇಶಗಳ ಧ್ವಜಗಳನ್ನು ಸ್ಟೇಡಿಯಮ್‌ನಲ್ಲಿ ಎದ್ದು ಕಾಣುವಂತೆ ಹಾಕಿರುವುದನ್ನು ವೀಡಿಯೊ ತೋರಿಸುತ್ತದೆ. ಆದರೆ, ಭಾರತೀಯ ತ್ರಿವರ್ಣ ಧ್ವಜವು ನಾಪತ್ತೆಯಾದಂತೆ ಕಾಣಿಸುತ್ತದೆ. ಈ ಬೆಳವಣಿಗೆಯು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಭಾರತೀಯ ಧ್ವಜದ ಅನುಪಸ್ಥಿತಿಗೆ ನಿಖರ ಕಾರಣ ಗೊತ್ತಿಲ್ಲವಾದರೂ, ಭಾರತೀಯ ತಂಡವು ತನ್ನ ಯಾವುದೇ ಪಂದ್ಯವನ್ನು ಪಾಕಿಸ್ತಾನದಲ್ಲಿ ಆಡದಿರುವುದು ಇದಕ್ಕೆ ಕಾರಣವಾಗಿರಬಹುದು ಎಂಬ ಊಹಾಪೋಹಗಳನ್ನು ಸಾಮಾಜಿಕ ಮಾಧ್ಯಮಗಳ ಸದಸ್ಯರು ಮಾಡುತ್ತಿದ್ದಾರೆ.
ಪಂದ್ಯಾವಳಿಯಲ್ಲಿ ಭಾರತಕ್ಕಾಗಿ ಹೈಬ್ರಿಡ್ ಮಾದರಿಯನ್ನು ಅನುಸರಿಸಲಾಗಿದ್ದು, ಅದು ತನ್ನ ಎಲ್ಲಾ ಪಂದ್ಯಗಳನ್ನು ದುಬೈಯಲ್ಲಿ ಆಡಲಿದೆ.
ಕರಾಚಿಯ ನ್ಯಾಶನಲ್ ಸ್ಟೇಡಿಯಮ್ ನಲ್ಲಿ ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಆಡಲಿವೆ.
ಇದಕ್ಕೂ ಮೊದಲು, ಲಾಹೋರ್‌ನ ಗದ್ದಾಫಿ ಸ್ಟೇಡಿಯಮ್ ಬಗ್ಗೆಯೂ ಇಂಥದೇ ಆರೋಪವನ್ನು ಮಾಡಲಾಗಿತ್ತು. ಪಂದ್ಯಾವಳಿಗೆ ಮುನ್ನ ಅಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಭಾರತೀಯ ರಾಷ್ಟ್ರ ಧ್ವಜ ನಾಪತ್ತೆಯಾಗಿತ್ತು ಎನ್ನಲಾಗಿದೆ. ಇತರ ಏಳು ದೇಶಗಳ ಧ್ವಜಗಳನ್ನು ಹಾಕಲಾಗಿತ್ತು.