×
Ad

ಚಾಂಪಿಯನ್ಸ್ ಟ್ರೋಫಿ | ಭಾರತದ ಧ್ವಜ ಕೈಬಿಟ್ಟ ಬಗ್ಗೆ ಸ್ಪಷ್ಟನೆ ನೀಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

Update: 2025-02-18 16:56 IST

PC : X 

ಕರಾಚಿ: ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಧ್ವಜದ ಗೈರಿನ ಸುತ್ತ ಭುಗಿಲೆದ್ದಿರುವ ವಿವಾದದ ಕುರಿತು ಚಾಂಪಿಯನ್ಸ್ ಟ್ರೋಫಿ ಪ್ರಾರಂಭಕ್ಕೂ ಮುನ್ನ ಸ್ಪಷ್ಟನೆ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, “ಪಾಕಿಸ್ತಾನದಲ್ಲಿ ಆಡಲಿರುವ ದೇಶಗಳ ಧ್ವಜಗಳನ್ನು ಮಾತ್ರ ಕ್ರೀಡಾಂಗಣಗಳಲ್ಲಿ ಹಾರಿಸಲಾಗಿದೆ” ಎಂದು ಹೇಳಿದೆ.

ಈ ಕುರಿತು ಸೋಮವಾರ IANS ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು, “ಈ ವಿವಾದದ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕೃತ ಹೇಳಿಕೆ ನೀಡಬೇಕಾದ ಯಾವುದೇ ಅಗತ್ಯವಿಲ್ಲ. ಈ ಇಡೀ ಚರ್ಚೆ ತಪ್ಪು ಮಾಹಿತಿಯನ್ನು ಆಧರಿಸಿದ್ದು, ಆತಿಥೇಯ ರಾಷ್ಟ್ರವಾಗಿರುವ ಪಾಕಿಸ್ತಾನದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನದಂತೆ ಕಾಣುತ್ತಿದೆ” ಎಂದು ತಿಳಿಸಿದ್ದಾರೆ.

ಕರಾಚಿಯ ನ್ಯಾಷನಲ್ ಸ್ಟೇಡಿಯಂ, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಹಾಗೂ ಲಾಹೋರ್ ನ ಗಡ್ಡಾಫಿ ಸ್ಟೇಡಿಯಂನಲ್ಲಿ ಕ್ರಮವಾಗಿ ಆ ತಾಣಗಳಲ್ಲಿ ಆಡಲಿರುವ ದೇಶಗಳ ಧ್ವಜಗಳನ್ನು ಮಾತ್ರ ಪ್ರದರ್ಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕರಾಚಿಯ ಸ್ಟೇಡಿಯಂನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುತ್ತಿರುವ ಇತರ ದೇಶಗಳ ಧ್ವಜಗಳನ್ನು ಪ್ರದರ್ಶಿಸಲಾಗಿದ್ದರೂ, ಭಾರತದ ಧ್ವಜವು ನಾಪತ್ತೆಯಾಗಿದೆ ಎಂಬುದರತ್ತ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬೊಟ್ಟು ಮಾಡಿದ್ದರಿಂದ ಈ ವಿವಾದ ಭುಗಿಲೆದ್ದಿತ್ತು. ಈ ವಿಡಿಯೊ ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದು ಭಾರತೀಯ ಕ್ರಿಕೆಟ್ ಮಂಡಳಿಯು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲು ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಭಾರತ ಧ್ವಜವನ್ನು ಕೈಬಿಡುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಉದ್ದೇಶಪೂರ್ವಕ ನಿರ್ಧಾರವಾಗಿರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು.

ಪಾಕಿಸ್ತಾನದಲ್ಲಿನ ಭದ್ರತಾ ಕಳವಳ ಹಾಗೂ ರಾಜಕೀಯ ಪ್ರಕ್ಷುಬ್ಧತೆಯನ್ನು ಮುಂದು ಮಾಡಿ, ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರಾಕರಿಸಿತ್ತು. ಹೀಗಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಂಡಿತ್ತು. ಇದರ ಫಲವಾಗಿ, ಭಾರತದ ಎಲ್ಲ ಪಂದ್ಯಗಳೂ ದುಬೈನಲ್ಲಿ ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News