×
Ad

Chhattisgarh | 'ಪೊಲೀಸ್ ತುರ್ತು ವಾಹನ' ದ ಚಾಲಕ ಸೇರಿ ಐವರಿಂದ ಸಾಮೂಹಿಕ ಅತ್ಯಾಚಾರ

ಇಬ್ಬರ ಬಂಧನ; ಮೂವರು ಆರೋಪಿಗಳು ಪರಾರಿ

Update: 2026-01-11 23:22 IST

ಸಾಂದರ್ಭಿಕ ಚಿತ್ರ | PC : freepik.com

ರಾಯ್‌ಪುರ, ಜ. 11: ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿರುವ ಭೀಕರ ಘಟನೆ ವರದಿಯಾಗಿದೆ. ಆರೋಪಿಗಳಲ್ಲಿ ಛತ್ತೀಸ್‌ಗಢ ಪೊಲೀಸರ ಡಯಲ್–112 ತುರ್ತು ಪ್ರತಿಕ್ರಿಯೆ ಸೇವೆಯಲ್ಲಿ ನಿಯೋಜಿತ ಖಾಸಗಿ ಚಾಲಕನೊಬ್ಬ ಸೇರಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಗುರುವಾರ ರಾತ್ರಿ ಕೊರ್ಬಾ ಜಿಲ್ಲೆಯ ಬಂಕಿಮೊಂಗ್ರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಯುವತಿಗೆ ಪರಿಚಿತನಾಗಿದ್ದ ಆರೋಪಿಗಳಲ್ಲಿ ಒಬ್ಬ, ಆಕೆಯನ್ನು ಮನೆಯಿಂದ ಹೊರಗೆ ಕರೆದು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಡಯಲ್–112 ಚಾಲಕ ಸೇರಿದಂತೆ ಇತರ ನಾಲ್ವರು ಆರೋಪಿಗಳು ಕಾಯುತ್ತಿದ್ದರು. ಬಳಿಕ ಐವರು ಒಬ್ಬರಾದ ಬಳಿಕ ಒಬ್ಬರಂತೆ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ದೌರ್ಜನ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಯುವತಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಅಲ್ಲಿಯೇ ಬಿಟ್ಟುಹೋಗಿದ್ದಾರೆ. ನಂತರ ಪ್ರಜ್ಞೆ ಮರಳಿದ ಯುವತಿ ಮನೆಗೆ ಹಿಂತಿರುಗಿ ನಡೆದ ಘಟನೆಯನ್ನು ಕುಟುಂಬದವರಿಗೆ ತಿಳಿಸಿದ್ದಾಳೆ. ತಕ್ಷಣ ಕುಟುಂಬದವರು ಆಕೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಈ ಪ್ರಕರಣವನ್ನು ಮೊದಲಿಗೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ಆಗಿ ದಾಖಲಿಸಿ, ನಂತರ ಹೆಚ್ಚಿನ ತನಿಖೆಗಾಗಿ ಬಂಕಿಮೊಂಗ್ರಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಡಯಲ್–112 ಘಟಕದಲ್ಲಿ ನಿಯೋಜಿತ ಖಾಸಗಿ ಚಾಲಕ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊರ್ಬಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ತಿವಾರಿ ತಿಳಿಸಿದ್ದಾರೆ.

“ಉಳಿದ ಮೂವರು ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು,” ಎಂದು ಅವರು ಹೇಳಿದ್ದಾರೆ.

ವಿಧಿವಿಜ್ಞಾನ ತಂಡಗಳು ಅಪರಾಧ ಸ್ಥಳವನ್ನು ಪರಿಶೀಲಿಸಿದ್ದು, ಪೊಲೀಸರು ಸಾಕ್ಷಿಗಳು ಹಾಗೂ ಸಂತ್ರಸ್ತ ಯುವತಿಯ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಆಕೆಗೆ ಅಗತ್ಯ ವೈದ್ಯಕೀಯ ಆರೈಕೆ ಹಾಗೂ ಮಾನಸಿಕ ಸಮಾಲೋಚನೆ ಒದಗಿಸಲಾಗುತ್ತಿದೆ. ಎಲ್ಲಾ ಆರೋಪಿಗಳನ್ನು ಬಂಧಿಸಿದ ಬಳಿಕ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಬಂಕಿಮೊಂಗ್ರಾ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News