ಛತ್ತೀಸ್‌ಗಢ ರೈಲು ದುರಂತ: ಎಂಟಕ್ಕೇರಿದ ಮೃತರ ಸಂಖ್ಯೆ
PC: x.com/ndtv
ಹೊಸದಿಲ್ಲಿ: ಛತ್ತೀಸ್ಗಢದ ಬಿಲಾಸ್ಪುರ ಸಮೀಪ ಮಂಗಳವಾರ ಸಂಜೆ ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೇರಿದ್ದು, ಪ್ಯಾಸೆಂಜರ್ ರೈಲು ಕೆಂಪು ದೀಪದ ಸಿಗ್ನಲ್ ಉಲ್ಲಂಘಿಸಿ ಮುನ್ನಡೆದದ್ದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.
ಗೆವ್ರಾದಿಂದ ಬಿಲಾಸಪುರಕ್ಕೆ ಹೋಗತ್ತಿದ್ದ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲು (ಡೆಮು) ಬಿಲಾಸ್ಪುರ ಮತ್ತು ಗತೋರಾ ನಿಲ್ದಾಣಗಳ ನಡುವೆ ಗೂಡ್ಸ್ ರೈಲಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿತ್ತು.
"ರೈಲು ಅಧಿಕಾರಿಗಳ ಪ್ರಾಥಮಿಕ ಅಂದಾಜಿನ ಪ್ರಕಾರ ಡೆಮ ರೈಲು ಕೆಂಪು ಸಿಗ್ನಲ್ ದಾಟಿ ಮುನ್ನಡೆದದ್ದು ಬಹುಶಃ ದುರಂತಕ್ಕೆ ಕಾರಣ" ಎಂದು ರೈಲ್ವೆ ಮಂಡಳಿ ಪತ್ರಿಕಾ ಪ್ರಕಟಣೆ ನೀಡಿದೆ.
"ಗೂಡ್ಸ್ ರೈಲು ಮತ್ತು ಡೆಮು ಸ್ಥಳೀಯ ರೈಲಿನ ಢಿಕ್ಕಿಯ ದುರದೃಷ್ಟಕರ ಘಟನೆ ಬಿಲಾಸ್ಪುರ ರೈಲು ನಿಲ್ದಾಣದ ಬಳಿ ಇಂದು ಸಂಭವಿಸಿದೆ. ರೈಲ್ವೆ ಅಧಿಕಾರಿಗಳು ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಸಮರೋಪಾದಿಯಾಗಿ ಕೈಗೊಂಡಿದ್ದಾರೆ" ಎಂದು ಪ್ರಕಟಣೆ ವಿವರಿಸಿದೆ.
ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಇಬ್ಬರು ಇನ್ನೂ ಸಿಕ್ಕಿಹಾಕಿಕೊಂಡಿದ್ದಾರೆ. 16-17 ಮಂದಿಗೆ ಗಂಭೀರ ಗಾಯಗಳಾಗಿವೆ. ಇದು ದೊಡ್ಡ ದುರಂತ. ಇಲ್ಲಿರುವ ಪ್ರತಿಯೊಬ್ಬರೂ ರಕ್ಷಣಾ ಕಾರ್ಯಕ್ಕೆ ನೆರವಾಗುತ್ತಿದ್ದಾರೆ ಎಂದು ಬಿಲಾಸ್ಪುರ ಡಿಸಿ ಸಂಜಯ್ ಅಗರ್ವಾಲ್ ಹೇಳಿದ್ದಾರೆ.