ನ್ಯಾಯಾಂಗ ಚಟುವಟಿಕೆಯು ನ್ಯಾಯಾಂಗ ಭಯೋತ್ಪಾದನೆಯಾಗಬಾರದು: ಸಿಜೆಐ ಬಿ.ಆರ್. ಗವಾಯಿ
ಸಿಜೆಐ ಬಿ.ಆರ್. ಗವಾಯಿ | PC : X
ಹೊಸದಿಲ್ಲಿ: ನ್ಯಾಯಾಂಗ ಚಟುವಟಿಕೆಯು ನ್ಯಾಯಾಂಗ ಭಯೋತ್ಪಾದನೆಯಾಗಬಾರದು ಎಂದು ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಬಿ.ಆರ್.ಗವಾಯಿ ಹೇಳಿದ್ದಾರೆ. ಗುರುವಾರ ರಾಜ್ಯ ವಿಧಾನಸಭೆಗಳು ಅಂಗೀಕರಿಸಿರುವ ಮಸೂದೆಗಳನ್ನು ನಿರ್ವಹಿಸಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಸಮಯ ಮಿತಿಗಳನ್ನು ವಿಧಿಸಬಹುದೇ ಎಂಬ ಸಾಂವಿಧಾನಿಕ ಪ್ರಶ್ನೆಯನ್ನು ಹುಟ್ಟುಹಾಕಿರುವ ರಾಷ್ಟ್ರಪತಿಗಳ ಉಲ್ಲೇಖ ವಿಚಾರಣೆ ಸಂದರ್ಭ ಸಿಜೆಐ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬಹಳಷ್ಟು ಅನುಭವ ಹೊಂದಿರುವ ಚುನಾಯಿತ ಪ್ರತಿನಿಧಿಗಳನ್ನು ಎಂದಿಗೂ ಕಡೆಗಣಿಸಬಾರದು ಎಂದು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಜೆಐ ನೇತೃತ್ವದ ನ್ಯಾಯಮೂರ್ತಿಗಳಾದ ಸೂರ್ಯಕಾಂತ,ವಿಕ್ರಮನಾಥ,ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್ಕರ್ ಅವರ ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಗವಾಯಿ, ‘ನಾವು ಚುನಾಯಿತ ಪ್ರತಿನಿಧಿಗಳ ಬಗ್ಗೆ ಎಂದಿಗೂ ಏನೂ ಹೇಳಿಲ್ಲ. ನ್ಯಾಯಾಂಗ ಚಟುವಟಿಕೆಯು ಎಂದಿಗೂ ನ್ಯಾಯಾಂಗ ಭಯೋತ್ಪಾದನೆ ಅಥವಾ ನ್ಯಾಯಾಂಗ ಸಾಹಸವಾಗಬಾರದು ಎಂದು ನಾನು ಯಾವಾಗಲೂ ಹೇಳುತ್ತಲೇ ಬಂದಿದ್ದೇನೆ’ ಎಂದು ಹೇಳಿದರು.
ವಿಚಾರಣೆಯು ಗುರುವಾರ ಸತತ ಮೂರನೇ ದಿನಕ್ಕೆ ಕಾಲಿರಿಸಿದ್ದು,ಮೆಹ್ತಾ ರಾಜ್ಯಪಾಲರ ಅಧಿಕಾರಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ತನ್ನ ವಾದವನ್ನು ಪುನರಾರಂಭಿಸಿದರು.
ಆರಂಭದಲ್ಲಿ ಮೆಹ್ತಾ, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಹೊಂದಿರುವುದರಿಂದ ಮತ್ತು ಅವರು ಸಂಸದೀಯ ಪಟು ಹಾಗೂ ಮಾಜಿ ಸಚಿವರೂ ಆಗಿರುವುದರಿಂದ ರಾಷ್ಟ್ರಪತಿಗಳ ಉಲ್ಲೇಖದ ಕುರಿತು ಅವರ ನಿವೇದನೆಗಾಗಿ ತಾನು ಎದುರು ನೋಡುತ್ತಿರುವುದಾಗಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಚುನಾಯಿತ ಪ್ರತಿನಿಧಿಗಳು ಮತದಾರರಿಗೆ ನೇರವಾಗಿ ಪ್ರತಿಕ್ರಿಯಿಸಬೇಕಿದೆ. ಜನರು ಈಗ ನೇರವಾಗಿ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಪರಿಸ್ಥಿತಿಯು ಭಿನ್ನವಾಗಿದ್ದ 20-25 ವರ್ಷಗಳ ಹಿಂದಿನಂತಲ್ಲದೆ ಈಗ ಮತದಾರರು ಜಾಗ್ರತರಾಗಿದ್ದಾರೆ ಮತ್ತು ಅವರ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂದು ಮೆಹ್ತಾ ಹೇಳಿದರು.
ರಾಜ್ಯಪಾಲರು ಸಮ್ಮತಿಯನ್ನು ತಡೆಹಿಡಿಯುವುದು ಸಂವಿಧಾನದ ವಿಧಿ 200ರಡಿ ಹೇಳಿರುವಂತೆ ಸಾಂವಿಧಾನಿಕ ಅಧಿಕಾರಿಯ ಸ್ವತಂತ್ರ ಮತ್ತು ಸಂಪೂರ್ಣ ವಿವೇಚನಾಧಿಕಾರವಾಗಿದೆ ಎಂದು ಅವರು ವಾದಿಸಿದರು.