×
Ad

ನ್ಯಾಯಮೂರ್ತಿ ಯಶವಂತ್ ವರ್ಮಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಗವಾಯಿ

Update: 2025-07-23 11:51 IST

ನ್ಯಾಯಮೂರ್ತಿ ಯಶವಂತ್ ವರ್ಮಾ / ಸಿಜೆಐ ಬಿ.ಆರ್. ಗವಾಯಿ (Photo: PTI)

ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಬುಧವಾರ ಹಿಂದೆ ಸರಿದಿದ್ದಾರೆ.

ತಮ್ಮ ಅಧಿಕೃತ ನಿವಾಸದಲ್ಲಿ ಲೆಕ್ಕಕ್ಕೆ ಸಿಗದಷ್ಟು ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಆಂತರಿಕ ಸಮಿತಿ ವರದಿಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ವರ್ಮಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿ ವರ್ಮಾ ಪರವಾಗಿ ತುರ್ತು ವಿಚಾರಣೆಗೆ ಮನವಿ ಸಲ್ಲಿಸಿದಾಗ, “ನಾನು ಆ ಸಮಿತಿಯ ಭಾಗವಾಗಿದ್ದೆ. ಈ ಕಾರಣದಿಂದಾಗಿ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನನಗೆ ಸಾಧ್ಯವಿಲ್ಲ,” ಎಂದು ಸಿಜೆಐ ಗವಾಯಿ ಸ್ಪಷ್ಟಪಡಿಸಿದರು.

ನ್ಯಾಯಮೂರ್ತಿ ವರ್ಮಾ ಅವರು ತಮ್ಮ ವಿರುದ್ಧದ ಆಂತರಿಕ ತನಿಖೆಯ ಶಿಫಾರಸುಗಳನ್ನು ಅಸಂವಿಧಾನಿಕವೆಂದು ಉಲ್ಲೇಖಿಸಿ, ಈ ಕಾರ್ಯವಿಧಾನವು ಸಂವಿಧಾನಬದ್ಧವಾಗಿ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ವಿರುದ್ಧವಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

1968ರ ನ್ಯಾಯಾಧೀಶರ (ವಿಚಾರಣೆ) ಕಾಯ್ದೆಯನ್ನು ಉಲ್ಲೇಖಿಸಿ, ಯಾವುದೇ ಔಪಚಾರಿಕ ದೂರು ಇಲ್ಲದಿರುವಾಗ ಆಂತರಿಕ ತನಿಖೆಯ ಮೂಲಕ ತಮ್ಮ ವಿರುದ್ಧ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.

2024ರ ಮಾರ್ಚ್ 14ರಂದು ದಿಲ್ಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಬಿದ್ದಾಗ, ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿತ್ತು. ಈ ಸಮಯದಲ್ಲಿ ಅವರು ಹಾಗೂ ಅವರ ಪತ್ನಿ ದಿಲ್ಲಿಯಲ್ಲಿ ಇರಲಿಲ್ಲ, ಮಧ್ಯಪ್ರದೇಶದಲ್ಲಿ ಇದ್ದರು. ಅವರ ಮಗಳು ಮತ್ತು ವಯಸ್ಸಾದ ತಾಯಿ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಈ ಘಟನೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಕೂಡ ವೈರಲ್ ಆಗಿತ್ತು.

ಈ ಬಳಿಕ, ಆಗಿನ ಸಿಜೆಐ ಸಂಜೀವ್ ಖನ್ನಾ ಅವರು ಪಂಜಾಬ್ ಮತ್ತು ಹರ್ಯಾಣ ಸಿಜೆಐ ಶೀಲ್ ನಾಗು, ಹಿಮಾಚಲ ಸಿಜೆಐ ಜಿ ಎಸ್ ಸಂಧ್ ವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್‌ ಹಿರಿಯ ನ್ಯಾಯಾಧೀಶ ಅನು ಶಿವರಾಮನ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಿ ತನಿಖೆ ನಡೆಸಿದರು. ಈ ಸಮಿತಿ ಮೇ 3ರಂದು ತನ್ನ ಅಂತಿಮ ವರದಿಯನ್ನು ನೀಡಿದ್ದು, ಮೇ 4ರಂದು ರಾಷ್ಟ್ರಪತಿಗೆ ದೋಷಾರೋಪಣೆ ಗೆ ಶಿಫಾರಸು ಸಲ್ಲಿಸಲಾಗಿತ್ತು. ವಾಗ್ದಂಡನೆ ವಿಧಿಸುವಂತೆ ಶಿಫಾರಸು ಮಾಡಲಾಗಿತ್ತು.

ಅರ್ಜಿಯಲ್ಲಿ, ಸಮಿತಿಯು ತನಿಖೆಯ ಕಾರ್ಯವಿಧಾನವನ್ನು ತಿಳಿಸದೇ, ಸಾಕ್ಷ್ಯಗಳ ಕುರಿತು ಸ್ಪಷ್ಟತೆಯನ್ನು ನೀಡದೇ ಇರುವುದರಿಂದ ನ್ಯಾಯದ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ವರ್ಮಾ ಆರೋಪಿಸಿದ್ದಾರೆ. ಪತ್ತೆಯಾದ ನಗದು ಯಾರಿಗೆ ಸೇರಿದೆ, ಎಷ್ಟು ಮೊತ್ತವಿತ್ತು ಎಂಬುದು ಸಮಿತಿಯ ವರದಿಯಲ್ಲಿ ಸ್ಪಷ್ಟವಿಲ್ಲ ಎಂದು ಅವರು ತಿಳಿಸಿದ್ದಾರೆ.

ನ್ಯಾಯಮೂರ್ತಿ ವರ್ಮಾ ಅವರು, ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆಯ ಮೂಲಕ ಈ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿರುವುರಿಂದ, ಮಾಧ್ಯಮದ ವಿಚಾರಣೆಗೆ ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ಅರ್ಜಿಯಲ್ಲಿ, ಸಿಜೆಐ ಖನ್ನಾ ಅವರು ತಮ್ಮ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿಗೆ ಸೂಚಿಸಿದ್ದರ ಜೊತೆಗೆ, ಪದಚ್ಯುತಗೊಳಿಸುವ ಪ್ರಕ್ರಿಯೆ ಆರಂಭಿಸುವ ಕುರಿತು ಎಚ್ಚರಿಕೆ ನೀಡಿರುವುದನ್ನೂ ನ್ಯಾಯಮೂರ್ತಿ ವರ್ಮಾ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News