"ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ": ‘ಹೋಗಿ ನಿಮ್ಮ ದೇವರನ್ನು’ ಕೇಳಿ ಎಂಬ ತನ್ನ ಹೇಳಿಕೆ ಕುರಿತ ವಿವಾದಕ್ಕೆ ಸಿಜೆಐ ಗವಾಯಿ ಪ್ರತಿಕ್ರಿಯೆ
ಸಿಜೆಐ ಬಿ.ಆರ್. ಗವಾಯಿ
ಹೊಸದಿಲ್ಲಿ: ‘ಹೋಗಿ ನಿಮ್ಮ ದೇವರನ್ನು ಕೇಳಿ’ ಎಂಬ ತನ್ನ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಆಕ್ರೋಶಕ್ಕೆ ಗುರುವಾರ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಬಿ.ಆರ್.ಗವಾಯಿ ಅವರು ‘ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ಹೇಳಿದರು.
ಸಿಜೆಐ ಹೇಳಿಕೆ ಕುರಿತಂತೆ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ‘ನಾವು ಇದನ್ನು ನೋಡಿದ್ದೇವೆ. ಪ್ರತಿಯೊಂದೂ ಕ್ರಿಯೆಗೆ ಸಮಾನ ಪ್ರತಿಕ್ರಿಯೆ ಇರುತ್ತದೆ ಎಂದು ನ್ಯೂಟನ್‌ನ ನಿಯಮ ಹೇಳುತ್ತದೆ. ಆದರೆ ಈಗ ಪ್ರತಿಯೊಂದೂ ಕ್ರಿಯೆಗೂ ಅಸಮಾನ ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ ಇರುತ್ತದೆ’ ಎಂದು ಹೇಳಿದರು.
ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಮಧ್ಯಪ್ರದೇಶದ ಖುಜರಾಹೊ ದೇವಸ್ಥಾನ ಸಂಕೀರ್ಣದ ಭಾಗವಾಗಿರುವ ಹಾನಿಗೀಡಾಗಿರುವ ಜವಾರಿ ದೇವಸ್ಥಾನದಲ್ಲಿಯ ಏಳು ಅಡಿ ಎತ್ತರದ ವಿಷ್ಣು ವಿಗ್ರಹದ ಮರುನಿರ್ಮಾಣ ಮತ್ತು ಪುನರ್‌ಸ್ಥಾಪನೆಗೆ ನಿರ್ದೇಶನಗಳನ್ನು ಕೋರಿ ರಾಕೇಶ್ ದಲಾಲ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಮಂಗಳವಾರ ವಜಾಗೊಳಿಸಿತ್ತು.
ಇದು ಶುದ್ಧ ‘ಪ್ರಚಾರ ಹಿತಾಸಕ್ತಿ ಅರ್ಜಿ’ಯಾಗಿದೆ. ಹೋಗಿ ಏನಾದರೂ ಮಾಡುವಂತೆ ನಿಮ್ಮ ದೇವರನ್ನೇ ಕೇಳಿಕೊಳ್ಳಿ. ನೀವು ಶ್ರೀವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತಿದ್ದರೆ ನೀವು ಪ್ರಾರ್ಥನೆಯನ್ನು ಮತ್ತು ಧ್ಯಾನವನ್ನು ಮಾಡಿ ಎಂದು ನ್ಯಾ.ಗವಾಯಿ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿತ್ತು.
ವಿಗ್ರಹದ ತಲೆ ಭಾಗವು ಶಿಥಿಲಗೊಂಡಿದೆ ಎಂದು ಹೇಳಿದ ಅರ್ಜಿದಾರರ ಪರ ವಕೀಲರು ಅದರ ಪುನರ್‌ನಿರ್ಮಾಣಕ್ಕೆ ಅವಕಾಶ ನೀಡಲು ಮಧ್ಯಪ್ರವೇಶಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದ್ದರು.
ಈ ವಿಷಯವು ಸಂಪೂರ್ಣವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್‌ಐ)ಯ ಅಧಿಕಾರ ವ್ಯಾಪ್ತಿಯಲ್ಲಿದೆ. ಈ ಕೆಲಸಕ್ಕೆ ಎಎಸ್‌ಐ ಅನುಮತಿಸುತ್ತದೆಯೇ ಎನ್ನುವುದು ಸೇರಿದಂತೆ ವಿವಿಧ ವಿಷಯಗಳಿವೆ ಎಂದು ಹೇಳಿದ್ದ ನ್ಯಾ.ಗವಾಯಿ,ಈ ನಡುವೆ ನೀವು ಶೈವ ಧರ್ಮದ ವಿರೋಧಿಯಲ್ಲದಿದ್ದರೆ ಅಲ್ಲಿ ಅತ್ಯಂತ ದೊಡ್ಡ ಶಿವಲಿಂಗವಿದೆ,ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಬಹುದು. ಅದು ಖುಜರಾಹೊದಲ್ಲಿಯ ದೊಡ್ಡ ಲಿಂಗಗಳಲ್ಲಿ ಒಂದಾಗಿದೆ ಎಂದು ಸಲಹೆ ನೀಡಿದ್ದರು.