×
Ad

ಟಾಪರ್ ವಿದ್ಯಾರ್ಥಿಗಳನ್ನು ʼನಮ್ಮವರುʼ ಎನ್ನುವ ಕೋಚಿಂಗ್ ಸೆಂಟರ್ ಗಳು!

Update: 2025-06-06 18:51 IST

ಸಾಂದರ್ಭಿಕ ಚಿತ್ರ

ಪ್ರತಿ ವರ್ಷ ಜೆಇಇ ಅಡ್ವಾನ್ಸ್ಡ್ ಫಲಿತಾಂಶಗಳ ನಂತರ, ಪ್ರಮುಖ ಕೋಚಿಂಗ್ ಸಂಸ್ಥೆಗಳು ಉನ್ನತ ರ‍್ಯಾಂಕ್ ಪಡೆದವರು ತಮ್ಮಲ್ಲಿ ಕೋಚಿಂಗ್ ಪಡೆದವರು ಎಂಬ ಜಾಹೀರಾತುಗಳನ್ನು ಪ್ರಕಟಿಸುತ್ತವೆ. ಈ ವರ್ಷವೂ ಹಾಗೇ ಆಗಿದೆ. ಮೊನ್ನೆ ಫಲಿತಾಂಶ ಬಂದ ಮರುದಿನ ಪ್ರಮುಖ ಪತ್ರಿಕೆಗಳಲ್ಲಿ ಪೇಜು ಗಟ್ಟಲೆ ಜಾಹೀರಾತುಗಳು. ಎಲ್ಲ ಕೋಚಿಂಗ್ ಸೆಂಟರ್ ಗಳೂ ಹೇಳೋದು ಟಾಪರ್ ಗಳು ನಮ್ಮವರು ಅಂತ. ಅವು ಹೇಳಿಕೊಳ್ಳುತ್ತಿರುವುದು ಎಷ್ಟು ನಿಜ?

ವಾಸ್ತವದಲ್ಲಿ, ಅವು ದಾರಿ ತಪ್ಪಿಸುವ ಸುಳ್ಳು ಜಾಹೀರಾತುಗಳಾಗಿರುತ್ತವೆ. ಅಂತಹ ಜಾಹೀರಾತುಗಳ ಹಿಂದಿನ ವಾಸ್ತವವನ್ನು ತಿಳಿಯುವುದು ಅಗತ್ಯ.

ಈ ಕೋಚಿಂಗ್ ಸಂಸ್ಥೆಗಳು ಟಾಪರ್ ಗಳು ನಮ್ಮ ವಿದ್ಯಾರ್ಥಿಗಳು ಎಂದು ಹೇಳಿಕೊಳ್ಳುತ್ತಿರುವ ಹಿಂದೆ ದೊಡ್ಡ ಚೌಕಾಸಿ, ಲೆಕ್ಕಾಚಾರ, ವಹಿವಾಟು ಎಲ್ಲವೂ ನಡೆದಿರುತ್ತದೆ. ಅದಕ್ಕಾಗಿಯೇ ಮಹೇಶ್ವರ್ ಪೆರಿ ಅವರ Careers360 ಸಂಸ್ಥೆ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಟಾಪ್ ನೂರು ರ‍್ಯಾಂಕ್ ಪಡೆದ ಮಕ್ಕಳ ವಿವರಗಳನ್ನು ಕಲೆ ಹಾಕಿ ಈ ಕೋಚಿಂಗ್ ಸೆಂಟರ್ ಗಳು ಹೇಳುತ್ತಿರುವುದರಲ್ಲಿ ಎಷ್ಟು ಸತ್ಯವಿದೆ? ಎಷ್ಟು ಸುಳ್ಳಿದೆ ಎಂದು ಪತ್ತೆ ಹಚ್ಚಿದೆ.

ಹೀಗೆ ಪಟ್ಟಿ ಮಾಡುವಾಗ Careers360 ಸಂಸ್ಥೆ ಆಫ್ ಲೈನ್ ನಲ್ಲಿ ಕಲಿತ ವಿವರಗಳನ್ನು ಮಾತ್ರ ಒಟ್ಟುಗೂಡಿಸಿದೆ. ಆನ್ ಲೈನ್ ತರಬೇತಿ ಪಡೆದಿದ್ದನ್ನು ಪಟ್ಟಿ ಮಾಡಿಲ್ಲ. ರಜತ್ ಗುಪ್ತಾ ಮತ್ತು ಮಜೀದ್ ಹುಸೇನ್ ಸೇರಿದಂತೆ ಅನೇಕ ಟಾಪರ್‌ ಗಳು ಸಾಂಪ್ರದಾಯಿಕ ತರಬೇತಿಯಲ್ಲದೆ, ಸ್ವಯಂ ಅಧ್ಯಯನ, ದೂರಶಿಕ್ಷಣ ಅಥವಾ ವಸತಿ ಶಾಲೆಗಳ ಬೆಂಬಲದ ಮೂಲಕ ಯಶಸ್ಸನ್ನು ಸಾಧಿಸಿದರು. ಆದರೂ, ಅನೇಕ ಸಂಸ್ಥೆಗಳು ತಮ್ಮ ಇಮೇಜ್ ಅನ್ನು ಹೆಚ್ಚಿಸಲು ಅವರನ್ನು ತಮ್ಮ ವಿದ್ಯಾರ್ಥಿಗಳೆಂದು ತೋರಿಸುತ್ತವೆ.

ಈ ದಾರಿತಪ್ಪಿಸುವ ತಂತ್ರಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಮರುಳಾಗಬಾರದು. ಆಲ್ ಇಂಡಿಯಾ ಮೊದಲ ರ‍್ಯಾಂಕ್ ಪಡೆದ ರಜತ್ ಗುಪ್ತಾ, ಎರಡನೇ ರ‍್ಯಾಂಕ್ ಪಡೆದ ಸಕ್ಷಮ್ ಜಿಂದಾಲ್ ಮತ್ತು ಮೂರನೇ ರ‍್ಯಾಂಕ್ ಪಡೆದ ಮಜೀದ್ ಮುಜಾಹಿದ್ ಹುಸೇನ್ ಇವರನ್ನೆಲ್ಲ ತಮ್ಮಲ್ಲಿ ಕೋಚಿಂಗ್ ಪಡೆದವರು ಎಂದು ತೋರಿಸಲು ಕೋಚಿಂಗ್ ಸಂಸ್ಥೆಗಳು ಪೈಪೋಟಿಗೆ ಬಿದ್ದಿವೆ ಎಂಬುದನ್ನು ಕರಿಯರ್ಸ್ 360 ಯೂಟ್ಯೂಬ್ ಚಾನೆಲ್ ಹೇಳುತ್ತದೆ.

ಒಬ್ಬ ವಿದ್ಯಾರ್ಥಿ ಎಲ್ಲೋ ಅಣಕು ಪರೀಕ್ಷೆ ಬರೆದಿರಬಹುದು, ಎಲ್ಲೋ ನೋಂದಾಯಿಸಿರಬಹುದು, ಎಲ್ಲೋ ಪರೀಕ್ಷೆಗೆ ನೋಂದಾಯಿಸಿರಬಹುದು. ಹಾಗೆಂದು ಆ ಕೋಚಿಂಗ್ ಸಂಸ್ಥೆಯೇ ಅವನಿಗೆ ಎಲ್ಲವನ್ನೂ ಕಲಿಸಿದೆ ಎಂದು ಅರ್ಥವಲ್ಲ.ದಾರಿ ತಪ್ಪಿಸಲು, ತಪ್ಪು ಮಾರ್ಗ ತೋರಿಸಲು, ತಪ್ಪು ಮಾಹಿತಿ ನೀಡಲು ಅನೇಕ ಜಾಹೀರಾತುಗಳನ್ನು ಮುದ್ರಿಸಲಾಗುತ್ತದೆ. ಇವು ಪೂರ್ಣ ಪುಟದ ಜಾಹೀರಾತುಗಳು. ಫಲಿತಾಂಶ ಬರುವ ದಿನ, ಮರುದಿನ ಬೆಳಗ್ಗೆ ಇಂಥ ಪೂರ್ಣ ಪುಟದ ಜಾಹೀರಾತನ್ನು ಕಾಣಬಹುದು.

ನಾರಾಯಣ್ ಶಿಕ್ಷಣ ಸಂಸ್ಥೆಗಳ ಜಾಹೀರಾತು ನಾವು ಯಾವಾಗಲೂ ನಂಬರ್ ಒನ್ ಎಂದು ಹೆಳಿಕೊಳ್ಳುತ್ತದೆ. ಆದರೆ ಅದರ ವಿದ್ಯಾರ್ಥಿಗಳ ರ‍್ಯಾಂಕ್ ನಿಜವಾಗಿ ಮೂರನೇ ರ‍್ಯಾಂಕ್ ನಿಂದ ಪ್ರಾರಂಭವಾಗುತ್ತದೆ. ಆದರೆ ನೋಡುವವರ ದಾರಿ ತಪ್ಪಿಸಲು ಜಾಹೀರಾತಿನಲ್ಲಿ ಅದನ್ನು ಎಡಭಾಗದಲ್ಲಿ ಹೇಳಲಾಗಿದೆ. ತಾನು ಯಾವಾಗಲೂ ನಂಬರ್ ಒನ್ ಎಂದು ದೊಡ್ಡದಾಗಿ ಬರೆದಿದೆ. ರ‍್ಯಾಂಕ್ ಒನ್ ಎಂದು ದೊಡ್ಡದಾಗಿ ಬರೆದಲ್ಲಿ ಯಾವುದೇ ವಿದ್ಯಾರ್ಥಿಯ ಹೆಸರೂ ಇಲ್ಲ, ಫೋಟೋ ಕೂಡ ಇಲ್ಲ. ಯಾಕಂದ್ರೆ ಅವರ ವಿದ್ಯಾರ್ಥಿಗೆ ಮೊದಲ ರ‍್ಯಾಂಕ್ ಬಂದೇ ಇಲ್ಲ ಇದು ಪೂರ್ತಿಯಾಗಿ ಹೆತ್ತವರು ಹಾಗು ಮಕ್ಕಳನ್ನು ದಾರಿ ತಪ್ಪಿಸುವ ತಂತ್ರವಾಗಿದೆ.

ಶ್ರೀ ಚೈತನ್ಯ ಟೆಕ್ನೋ ಶಾಲೆ ಬಿಡುಗಡೆ ಮಾಡಿರುವ ಪೂರ್ಣ ಪುಟದ ಜಾಹೀರಾತಿನಲ್ಲಿ ನಂಬರ್ ಒನ್ ಜಾಗದಲ್ಲಿ ಋತ್ವಿಕ್ ಸಾಯಿ ಎಂಬ ವಿದ್ಯಾರ್ಥಿಯನ್ನು ತೋರಿಸಲಾಗಿದೆ. ಆದರೆ ನಂಬರ್ ಒನ್ ರ‍್ಯಾಂಕ್ ಪಡೆದಿರುವವರು ರಜತ್ ಗುಪ್ತಾ. ರುತ್ವಿಕ್ ಸಾಯಿ ಒಬಿಸಿ ಎನ್‌ಸಿಎಲ್‌ನಲ್ಲಿ ನಂಬರ್ ಒನ್. ಆದರೆ ಅಖಿಲ ಭಾರತ ರ‍್ಯಾಂಕ್‌ನಲ್ಲಿ 18 ನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಮಾತ್ರ ನಂಬರ್ ಒನ್ ಎಂದು ತೋರಿಸಲಾಗುತ್ತಿದೆ.

ಅ ಮೂಲಕ ನಂಬರ್ ಒನ್ ರ‍್ಯಾಂಕರ್ ತನ್ನ ಸಂಸ್ಥೆಯ ವಿದ್ಯಾರ್ಥಿ ಎಂಬ ಸಂಪೂರ್ಣ ಸುಳ್ಳು ಮಾಹಿತಿಯನ್ನು ಅದು ನೀಡುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ 3 ನೇ ರ‍್ಯಾಂಕ್ ಪಡೆದ ಹುಸೇನ್ ಮಾಜಿದ್ ಮಧ್ಯಪ್ರದೇಶದ ಉತ್ತಮ ಗುಣಮಟ್ಟದ ವಸತಿ ಶಾಲೆ ಮ್ಯಾಕ್ರೋ ವಿಷನ್ ಅಕಾಡೆಮಿಯಲ್ಲಿ ಓದಿದವರು. ಅಲ್ಲಿ ಶಾಲಾ ಶಿಕ್ಷಣದ ಜೊತೆಗೆ ಜೆಇಇಗೆ ತರಬೇತಿ ನೀಡಲಾಗುತ್ತದೆ. ಹುಸೇನ್ ಮಾಜಿದ್ ತನ್ನ ಸಂದರ್ಶನಗಳಲ್ಲಿ ಸ್ವಯಂ ಅಧ್ಯಯನ ಮಾಡುವ ಮೂಲಕ ಅಂತಹ ರ‍್ಯಾಂಕ್ ಪಡೆದಿದ್ದೇನೆ ಎಂದು ಹೇಳಿದ್ದಾರೆ.

ತಾನು ಕಲಿತ ಮ್ಯಾಕ್ರೋ ಕಾಲೇಜಿನ ಅಧ್ಯಾಪಕರು ನನಗೆ ಸಹಕರಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಕನಿಷ್ಠ ಮೂರು ಕೋಚಿಂಗ್ ಸಂಸ್ತೆಗಳು ಅವರನ್ನು ತಮ್ಮ ವಿದ್ಯಾರ್ಥಿ ಎಂದು ತೋರಿಸಿವೆ. ಫಿಸಿಕ್ಸ್ ವಾಲಾ, ನಾರಾಯಣ ಹಾಗು ಚೈತನ್ಯ ಟೆಕ್ನೋ ಸ್ಕೂಲ್ ನವರು ಈ ಹುಸೇನ್ ಮಾಜಿದ್ ನಮ್ಮ ವಿದ್ಯಾರ್ಥಿ ಎಂದು ತೋರಿಸಿವೆ.

ಇದನ್ನೆಲ್ಲಾ ನೋಡಿದರೆ, ತರಬೇತಿ ಸಂಸ್ಥೆಗಳು ಯಾವಾಗಲೂ ಟಾಪರ್ ಆಗಿರುವ ಯಾವುದೇ ವಿದ್ಯಾರ್ಥಿಯನ್ನು ತಮ್ಮ ವಿದ್ಯಾರ್ಥಿ ಎಮದು ತೋರಿಸುವ ಪ್ರವೃತ್ತಿಯಲ್ಲಿ ತೊಡಗಿರುವುದು ಸ್ಪಷ್ಟ. ಪ್ರಲೋಭನೆ ತೋರಿಸುವ ಮೂಲಕವೂ ಅವರನ್ನು ತಮ್ಮ ವಿದ್ಯಾರ್ಥಿಗಳನ್ನಾಗಿ ತೋರಿಸುತ್ತಾರೆ. ಹಾಗಾಗಿ, ಯಾವುದೇ ಜಾಹೀರಾತನ್ನು ನೋಡುವಾಗಲೂ ಅದು ಹೇಳಿಕೊಳ್ಳುತ್ತಿರುವುದನ್ನು ಎಚ್ಚರದಿಂದ ಪರಿಶೀಲಿಸಬೇಕು. ಟಾಪರ್ಗಳಿಗೆ ತರಬೇತಿ ನೀಡಿದೆ ಎಂದು ಭಾವಿಸಿ ಅಂಥ ತಪ್ಪು ಸಂಸ್ಥೆಗಳಲ್ಲಿ ತರಬೇತಿಗೆ ಸೇರುವ ತಪ್ಪನ್ನು ಯಾರೂ ಮಾಡಕೂಡದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News