IndiGo ಬಿಕ್ಕಟ್ಟಿನ ಬಳಿಕ ಎರಡು ಹೊಸ ಏರ್ಲೈನ್ಗಳಿಗೆ ಸರಕಾರದ ಅನುಮತಿ
ದೇಶೀಯ ವಾಯು ಮಾರ್ಗದಲ್ಲಿ ಪೈಪೋಟಿ ನೀಡಲಿರುವ Al Hind Air, Fly Express
ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ,ಡಿ.24: ನಾಗರಿಕ ವಾಯುಯಾನ ಸಚಿವಾಲಯವು Al Hind Air ಮತ್ತು Fly Express ಎಂಬ ಎರಡು ನೂತನ ವಿಮಾನಯಾನ ಸಂಸ್ಥೆಗಳಿಗೆ ಹಸಿರು ನಿಶಾನೆಯನ್ನು ತೋರಿಸಿದ್ದು,ಅವು ಮುಂದಿನ ವರ್ಷ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿವೆ.
ಉಭಯ ವಿಮಾನಯಾನ ಸಂಸ್ಥೆಗಳು ಬುಧವಾರ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಪಡೆದುಕೊಂಡಿವೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಇವುಗಳಲ್ಲದೆ, ಉತ್ತರ ಪ್ರದೇಶ ಮೂಲದ ಶಂಖ್ ಏರ್ ಕೂಡ 2026ರಲ್ಲಿ ಕಾರ್ಯಾಚರಣೆಯನ್ನು ಆರಂಭಿಸುವ ಸಾಧ್ಯತೆಯಿದ್ದು,ಅದು ಈಗಾಗಲೇ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.
ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಿಯ ನಾಗರಿಕ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತದಲ್ಲಿ ವಿಮಾನಯಾನ ಸಂಸ್ಥೆಗಳ ಸಂಖ್ಯೆಯಲ್ಲಿ ಏರಿಕೆಯನ್ನು ಸಚಿವಾಲಯವು ಎದುರು ನೋಡುತ್ತಿರುವಾಗ ಈ ಬೆಳವಣಿಗೆ ನಡೆದಿದೆ.
ಪ್ರಸಕ್ತ ಇಂಡಿಗೊ ಮತ್ತು ಏರ್ ಇಂಡಿಯಾ ಗ್ರೂಪ್ ದೇಶಿಯ ನಾಗರಿಕ ವಾಯುಯಾನ ಮಾರುಕಟ್ಟೆಯಲ್ಲಿ ಒಟ್ಟು ಶೇ.90ಕ್ಕೂ ಅಧಿಕ ಪಾಲನ್ನು ಹೊಂದಿವೆ.