West Bengal | ಮಥುವಾಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕುರಿತು ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ
ರಾಜಕೀಯ ವಲಯದಲ್ಲಿ ಆಕ್ರೋಶ
ಬಿಜೆಪಿ ಶಾಸಕ ಅಸಿಮ್ ಸರ್ಕಾರ್ (Photo: telegraphindia.com)
ಕೋಲ್ಕತ್ತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಮಥುವಾ ಸಮುದಾಯದ ಕುರಿತು ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಅಸಿಮ್ ಸರ್ಕಾರ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ದಶಕಗಳ ಹಿಂದೆ ವಲಸೆ ಬಂದಿದ್ದರೂ ಇನ್ನೂ ಭಾರತೀಯ ಪೌರತ್ವ ಪಡೆಯದ ಮಥುವಾ ಸಮುದಾಯದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಡುವ ಸಾಧ್ಯತೆ ಇದೆ ಎಂಬ ವರದಿಗಳ ಕುರಿತು ಪ್ರಶ್ನಿಸಿದಾಗ, ಹರಿಂಗತಾ ಕ್ಷೇತ್ರದ ಶಾಸಕ ಸರ್ಕಾರ್, “ಒಂದು ಲಕ್ಷವಾಗಲಿ, ಎರಡು ಲಕ್ಷವಾಗಲಿ, ಅವರ ಹೆಸರುಗಳನ್ನು ಅಳಿಸಿದರೂ ಸರಿಯೇ. ಪೌರತ್ವ ಸಿಗದಿದ್ದರೆ ಅವರು ಸಾಯಲಿ,” ಎಂದು ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಹರಿಂಗತಾ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಮಥುವಾ ಜನಸಂಖ್ಯೆಯಿದೆ. ಅವರ ಮಾತುಗಳಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇತ್ತೀಚೆಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಶಾಂತನು ಠಾಕೂರ್ ಅವರು, SIR ಪ್ರಕ್ರಿಯೆಯಲ್ಲಿ 50 ಲಕ್ಷ ಬಾಂಗ್ಲಾದೇಶಿ ಮುಸ್ಲಿಮರು ಹಾಗೂ ರೋಹಿಂಗ್ಯಾಗಳನ್ನು ಮತದಾನದ ಹಕ್ಕಿನಿಂದ ವಂಚಿಸಿದರೆ, ಅದರಲ್ಲಿ ಒಂದು ಲಕ್ಷ ಮಥುವಾ ಹೆಸರುಗಳು ಅಳಿದರೂ ಅದನ್ನು ಅಗತ್ಯ ಅಳಿಸುವಿಕೆ ಎಂದು ಪರಿಗಣಿಸಬೇಕು ಎಂದು ಹೇಳಿದ್ದರು.
ಆ ಬಳಿಕ ಅಸಿಮ್ ಸರ್ಕಾರ್ ಮಥುವಾ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಾಸಕ ಅಸಿಮ್ ಸರ್ಕಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಿಎಂಸಿ, “ಈ ಹೇಳಿಕೆ ಬಿಜೆಪಿಯು ಮಥುವಾ ಸಮುದಾಯದ ಬಗ್ಗೆ ಹೊಂದಿರುವ ನಿಲುವನ್ನು ಬಹಿರಂಗಪಡಿಸುತ್ತದೆ. ಚುನಾವಣೆಯ ವೇಳೆ ಪೌರತ್ವದ ಭರವಸೆ ನೀಡಿ ಮತ ಪಡೆದ ಬಳಿಕ, ಅವರನ್ನೇ ಎರಡನೇ ದರ್ಜೆಯ ನಾಗರಿಕರಂತೆ ಕಾಣಲಾಗುತ್ತಿದೆ,” ಎಂದು ಪಕ್ಷವು ಆರೋಪಿಸಿದೆ. ಇಂತಹ ನಿಲುವು ನಾಚಿಕೆಗೇಡಿನದ್ದು ಹಾಗೂ ಕ್ಷಮಿಸಲಾಗದ್ದು ಎಂದು ಟಿಎಂಸಿ ತಿಳಿಸಿದೆ.
ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಹೊಂದಿರುವ ಮಥುವಾ ಸಮುದಾಯವು ನಾಡಿಯಾ ಹಾಗೂ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಬೀರುವ ಶಕ್ತಿ ಹೊಂದಿದೆ. 1990ರ ದಶಕದಿಂದಲೇ ವಿವಿಧ ರಾಜಕೀಯ ಪಕ್ಷಗಳು ಮಥುವಾಗಳ ಬೆಂಬಲಕ್ಕಾಗಿ ಪ್ರಯತ್ನಿಸುತ್ತಿದ್ದು, 2026ರ ವಿಧಾನಸಭಾ ಚುನಾವಣೆಗೆ ಮುನ್ನ ಅವರು ಪ್ರಮುಖ ಮತಬ್ಯಾಂಕ್ ಆಗಿ ಪರಿಗಣಿಸಲ್ಪಡುತ್ತಿದ್ದಾರೆ.