×
Ad

Haridwar | ವಿದ್ಯುತ್ ಕಡಿತಕ್ಕೆ ಆಕ್ರೋಶ; ಕಂಬ ಏರಿ ಅಧಿಕಾರಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಾಂಗ್ರೆಸ್ ಶಾಸಕ

Update: 2025-12-25 13:52 IST

Screengrab: X/@amitbisht__

ಹರಿದ್ವಾರ: ಪದೇಪದೇ ವಿದ್ಯುತ್ ಕಡಿತದಿಂದ ಬೇಸತ್ತಿರುವ ಹರಿದ್ವಾರ ಜಿಲ್ಲೆಯ ಝಬ್ರೇರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಜಾತಿ, ವಿದ್ಯುತ್ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳ ನಿವಾಸಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ಮಂಗಳವಾರ ನಡೆದಿದೆ.

ಈ ಸಂಬಂಧ ವಿದ್ಯುತ್ ಇಲಾಖೆ ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಶಾಸಕ ವೀರೇಂದ್ರ ಜಾತಿ ವಿರುದ್ಧ ದೂರು ದಾಖಲಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ನಿವಾಸದಲ್ಲಿ, ಇಲಾಖೆಯ ಮುಖ್ಯ ಎಂಜಿನಿಯರ್ ಅವರದ್ದೂ ಸೇರಿದೆ ಎಂದು ತಿಳಿದು ಬಂದಿದೆ.

ಮಂಗಳವಾರ, ಶಾಸಕ ವೀರೇಂದ್ರ ಜಾತಿ ತಮ್ಮ ಬೆಂಬಲಿಗರೊಂದಿಗೆ ಏಣಿ ಹಾಗೂ ತಂತಿ ಕತ್ತರಿಸುವ ಉಪಕರಣಗಳನ್ನು ತೆಗೆದುಕೊಂಡು ರೂರ್ಕಿಗೆ ಆಗಮಿಸಿದರು. ಮೊದಲಿಗೆ ಬೋಟ್ ಕ್ಲಬ್ ಪ್ರದೇಶದಲ್ಲಿರುವ ಸೂಪರಿಂಟೆಂಡಿಂಗ್ ಎಂಜಿನಿಯರ್ ವಿವೇಕ್ ರಜಪೂತ್ ಅವರ ಅಧಿಕೃತ ನಿವಾಸದ ಹೊರಗಿನ ವಿದ್ಯುತ್ ಕಂಬವನ್ನು ಏರಿ, ಅವರ ಮನೆಗೆ ಹೋಗುವ ಸಂಪರ್ಕವನ್ನು ಕಡಿತಗೊಳಿಸಿದರು. ಬಳಿಕ ಮುಖ್ಯ ಎಂಜಿನಿಯರ್ ಅನುಪಮ್ ಸಿಂಗ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ಪಾಂಡೆ ಅವರ ನಿವಾಸಗಳಿಗೆ ತೆರಳಿ ಅಲ್ಲಿಯೂ ವಿದ್ಯುತ್ ಸ್ಥಗಿತಗೊಳಿಸಿದರು.

ತಮ್ಮ ಕ್ಷೇತ್ರದಲ್ಲಿ ದಿನಕ್ಕೆ ಐದರಿಂದ ಎಂಟು ಗಂಟೆಗಳವರೆಗೆ ಅಘೋಷಿತ ವಿದ್ಯುತ್ ಕಡಿತ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವ್ಯಾಪಾರ ಮತ್ತು ಸಣ್ಣ ಕೈಗಾರಿಕೆಗಳಿಗೆ ಭಾರಿ ನಷ್ಟವಾಗುತ್ತಿದೆ ಎಂದು ಜಾತಿ ಆರೋಪಿಸಿದರು. ಕಳೆದ ಹತ್ತು ದಿನಗಳಿಂದ ಈ ಸಮಸ್ಯೆಯನ್ನು ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಅವರು ಹೇಳಿದರು.

“ಒಂದು ಗಂಟೆ ವಿದ್ಯುತ್ ಕಡಿತಗೊಂಡರೂ ಅಧಿಕಾರಿಗಳು ಅಸಹನೀಯ ಸ್ಥಿತಿಗೆ ತಲುಪುತ್ತಾರೆ. ಆದರೆ ಸಾರ್ವಜನಿಕರು ಪ್ರತಿದಿನ ಗಂಟೆಗಟ್ಟಲೆ ವಿದ್ಯುತ್ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ,” ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯುತ್ ಇಲಾಖೆ, ಶಾಸಕರು ನಿಗದಿತ ನಿಯಮ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸದೇ ನೇರವಾಗಿ ವಿದ್ಯುತ್ ತಂತಿಗಳನ್ನು ಕತ್ತರಿಸಿದ್ದಾರೆ. ಇದರಿಂದ ದೊಡ್ಡ ಅಪಘಾತ ಸಂಭವಿಸುವ ಅಪಾಯವಿತ್ತು. ಇದು ನಿಯಮ ಉಲ್ಲಂಘನೆಯಷ್ಟೇ ಅಲ್ಲದೆ ಸರ್ಕಾರಿ ಕಾರ್ಯದಲ್ಲಿ ನೇರ ಹಸ್ತಕ್ಷೇಪವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News