ಕಳಂಕಿತ ಸಚಿವರ ವಜಾ ಕುರಿತ ಮಸೂದೆ ಪರಿಶೀಲನೆಗೆ 31 ಸದಸ್ಯರ ಜೆಪಿಸಿ ರಚನೆ| ಕಾಂಗ್ರೆಸ್ ವಿರೋಧ
ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ | Photo Credit : ANI
ಹೊಸದಿಲ್ಲಿ: ಗಂಭೀರ ಅಪರಾಧ ಪ್ರಕರಣಗಳಲ್ಲಿ 30 ದಿನಗಳವರೆಗೆ ಬಂಧನದಲ್ಲಿದ್ದರೆ ಅಂಥ ಕಳಂಕಿತ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ವಜಾಗೊಳಿಸುವ ಸಂಬಂಧದ ಮಸೂದೆಯ ಪರಿಶೀಲನೆಗೆ 31 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು ಬುಧವಾರ ಸಂಸತ್ ರಚನೆ ಮಾಡಿದೆ. ಆದಾಗ್ಯೂ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ 340 ಸದಸ್ಯರು ಸಮಿತಿಯನ್ನು ಬಹಿಷ್ಕರಿಸಿದ್ದಾರೆ.
ಕಳೆದ ತಿಂಗಳು ಶರದ್ ಪವಾರ್ ನೇತೃತ್ವದ ಎನ್‍ಸಿಪಿ ಸಮಿತಿಯಲ್ಲಿ ಭಾಗವಹಿಸುವ ನಿರ್ಧಾರ ಕೈಗೊಂಡಿತ್ತು. ಇದಕ್ಕೂ ಮುನ್ನ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಹೇಳಿಕೆ ನೀಡಿ, ಸಮಿತಿಯಿಂದ ಹೊರಗುಳಿಯುವ ವಿರೋಧ ಪಕ್ಷಗಳ ನಿರ್ಧಾರಕ್ಕೆ ಪ್ರತಿಯಾಗಿ ಪಕ್ಷ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಎನ್‍ಸಿಪಿ ಜತೆಗೆ ಎಐಎಂಐಎಂ ಮತ್ತು ವಿಜೆಡಿ, ವೈಎಸ್‍ಆರ್‍ಕಾಂಗ್ರೆಸ್ ಪಕ್ಷ ಹಾಗೂ ಶಿರೋಮಣಿ ಅಕಾಲಿದಳ ಸಮಿತಿಯಲ್ಲಿ ಸೇರಿವೆ.
ಬಹುತೇಕ ಭಾರತೀಯರನ್ನು ಪ್ರತಿನಿಧಿಸುವ ಜಂಟಿ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿರವುದು ಪ್ರಜಾಪ್ರಭುತ್ವದ ಅಣಕ ಎಂದು ಕಾಂಗ್ರೆಸ್ ಆಪಾದಿಸಿದೆ.
ಬಿಜೆಪಿ ಸಂಸದ ಅಪರಾಜಿತ ಸಾರಂಗಿ ನೇತೃತ್ವದ ಸಮಿತಿಯಲ್ಲಿ 21 ಮಂದಿ ಲೋಕಸಭಾ ಸದಸ್ಯರು ಹಾಗೂ 10 ಮಂದಿ ರಾಜ್ಯಸಭಾ ಸದಸ್ಯರು ಇರುತ್ತಾರೆ ಎಂದು ಸಂಸತ್ ಬುಲೆಟಿನ್ ಹೇಳಿದೆ.
ರವಿಶಂಕರ್ ಪ್ರಸಾದ್, ಭ್ರಾತೃಹರಿ ಮಹತಾಪ್, ಪ್ರದಾನ್ ಬರೂವಾ, ಬೃಜ್‍ಮೋಹನ್ ಅಗರ್‍ವಾಲ್, ವಿಷ್ಣು ದಯಾಳ್ ರಾಮ್, ಹರ್‍ಸಿಮ್ರತ್ ಬಾದರ್ ಮತ್ತಿತರರು ಸಮಿತಿಯಲ್ಲಿದ್ದಾರೆ. ಸಮಿತಿಯಲ್ಲಿ ಸ್ಥಾನ ಪಡೆದಿರುವ ರಾಜ್ಯಸಭಾ ಸದಸ್ಯರಲ್ಲಿ ಬೃಜ್‍ಲಾಲ್, ಉಜ್ವಲ್ ನಿಕ್ಕಮ್, ನಬಮ್ ರೆಬಿಯಾ, ಡಾ.ಕೆ.ಲಕ್ಷ್ಮಣ್, ಸುಧಾಮೂರ್ತಿ, ಬೀರೇಂದ್ರ ಪ್ರಸಾದ್ ಬೈಶ್ಯ ಮತ್ತು ಎಸ್.ನಿರಂಜನ್ ರೆಡ್ಡಿ ಸೇರಿದ್ದಾರೆ.