×
Ad

ಪಕ್ಷ ವಿರೋಧಿ ಚಟುವಟಿಕೆ ಆರೋಪ | 43 ನಾಯಕರಿಗೆ ಕಾಂಗ್ರೆಸ್ ಶೋ-ಕಾಸ್ ನೋಟಿಸ್

Update: 2025-11-18 21:02 IST

Photo Credit : ANI 

ಪಾಟ್ನಾ, ನ. 18: ಬಿಹಾರ ವಿಧಾನ ಸಭಾ ಚುನಾವಣೆ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವರು ಸೇರಿದಂತೆ 43 ನಾಯಕರಿಗೆ ಕಾಂಗ್ರೆಸ್ ಮಂಗಳವಾರ ಶೋ-ಕಾಸ್ ನೋಟಿಸ್ ನೀಡಿದೆ.

ಪಕ್ಷದ ನಿಲುವಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ಶಿಸ್ತು ಸಮಿತಿ ನಾಯಕರಿಗೆ ಶೋ-ಕಾಸ್ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ಹೇಳಿದೆ.

43 ಮಂದಿ ನಾಯಕರಲ್ಲಿ ಮಾಜಿ ಸಚಿವೆ ವೀನಾ ಶಾಹಿ, ಎಐಸಿಸಿ ಸದಸ್ಯ ಮಧುರೇಂದ್ರ ಕುಮಾರ್ ಸಿಂಗ್, ರಾಜ್ಯ ಕಾಂಗ್ರೆಸ್‌ ನ ಮಾಜಿ ಪ್ರಧಾನ ಕಾರ್ಯದರ್ಶಿ ಕೈಸರ್ ಖಾನ್, ಮಾಜಿ ಶಾಸಕ ಸುಧೀರ್ ಕುಮಾರ್ ಹಾಗೂ ಮಾಜಿ ಎಂಎಲ್‌ಸಿ ಅಜಯ್ ಕುಮಾರ್ ಸಿಂಗ್ ಸೇರಿದ್ದಾರೆ.

ನವೆಂಬರ್ 21ರಂದು ಮಧ್ಯಾಹ್ನದ ಒಳಗಡೆ ಶಿಸ್ತು ಸಮಿತಿ ಮುಂದೆ ಲಿಖಿತ ಸ್ಪಷ್ಟನೆ ಸಲ್ಲಿಸುವಂತೆ ಎಲ್ಲಾ ನಾಯಕರಿಗೆ ನಿರ್ದೇಶಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ನ ಶಿಸ್ತು ಸಮಿತಿ ಅಧ್ಯಕ್ಷ ಕಪಿಲ್ ದೇವ್ ಪ್ರಸಾದ್ ಯಾದವ್ ತಿಳಿಸಿದ್ದಾರೆ.

ಸಕಾಲದಲ್ಲಿ ಉತ್ತರಿಸದೇ ಇದ್ದರೆ, ಸಮಿತಿ ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕುವುದು ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಶಿಸ್ತು ಹಾಗೂ ಏಕತೆ ಪಕ್ಷದ ಆದ್ಯತೆಗಳಾಗಿದ್ದು, ಇವುಗಳಿಗೆ ಹಾನಿ ಉಂಟು ಮಾಡುವ ಯಾವುದೇ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News