‘ಭ್ರಷ್ಟ ಜನತಾ ಪಾರ್ಟಿ’: ದೇಶದ ವಿವಿಧ ರಾಜ್ಯಗಳಲ್ಲಿನ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
photo: PTI
ಹೊಸದಿಲ್ಲಿ: ಬಿಜೆಪಿಯನ್ನು ‘ಭ್ರಷ್ಟ ಜನತಾ ಪಾರ್ಟಿ’ ಎಂದು ಶುಕ್ರವಾರ ಬಣ್ಣಿಸಿರುವ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶದ ವಿವಿಧ ರಾಜ್ಯಗಳಲ್ಲಿನ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳು ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆ ಹಾಗೂ ದುರಹಂಕಾರದ ನಂಜಿನಿಂದ ಜನರ ಬದುಕನ್ನು ಹಾಳುಮಾಡಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ, ಉತ್ತರ ಪ್ರದೇಶದ ಉನ್ನಾಂವ್ ಅತ್ಯಾಚಾರ ಪ್ರಕರಣ, ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ ಹಲವು ಮಂದಿ ಮೃತಪಟ್ಟ ಪ್ರಕರಣ ಸೇರಿದಂತೆ ಹಲವು ಉದಾಹರಣೆಗಳನ್ನು ಉಲ್ಲೇಖಿಸಿರುವ ಅವರು, “ಪ್ರಧಾನಿ ನರೇಂದ್ರ ಮೋದಿಯವರ ಡಬಲ್ ಎಂಜಿನ್ ಸರ್ಕಾರ ಕೋಟ್ಯಧಿಪತಿಗಳಿಗಾಗಿ ನಡೆಯುತ್ತಿದೆಯೇ ಹೊರತು, ಸಾಮಾನ್ಯ ಭಾರತೀಯರಿಗಾಗಿ ಅಲ್ಲ. ಈ ಭ್ರಷ್ಟಾಚಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಯಲ್ಲ; ಇದು ವಿನಾಶದ ವೇಗವಾಗಿದೆ. ಪ್ರತಿದಿನವೂ ಯಾರದಾದರೂ ಬದುಕನ್ನು ಧ್ವಂಸ ಮಾಡುತ್ತಿದೆ” ಎಂದು ತೀವ್ರ ಪ್ರಹಾರ ನಡೆಸಿದ್ದಾರೆ.
“ದೇಶಾದ್ಯಂತ ಭ್ರಷ್ಟ ಜನತಾ ಪಾರ್ಟಿಯ ಡಬಲ್ ಎಂಜಿನ್ ಸರ್ಕಾರಗಳು ಜನರ ಬದುಕನ್ನು ಹಾಳುಮಾಡಿವೆ. ಬಿಜೆಪಿಯ ರಾಜಕಾರಣದಲ್ಲಿ ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಹಾಗೂ ದುರಹಂಕಾರದ ನಂಜು ವ್ಯಾಪಿಸಿದೆ. ಅವರ ವ್ಯವಸ್ಥೆಯಲ್ಲಿ ಬಡವರು, ಅಸಹಾಯಕರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರ ಬದುಕು ಕೇವಲ ಅಂಕಿ-ಸಂಖ್ಯೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸುಲಿಗೆಯ ಜಾಲವೊಂದು ನಡೆಯುತ್ತಿದೆ” ಎಂದೂ ಅವರು ಆರೋಪಿಸಿದ್ದಾರೆ.
“ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಇಡೀ ದೇಶವನ್ನೇ ಅಲ್ಲಾಡಿಸಿದೆ. ಆದರೆ ಅಧಿಕಾರದಲ್ಲಿರುವವರು ಯಾವ ಬಿಜೆಪಿಯ ವಿಐಪಿಯನ್ನು ರಕ್ಷಿಸುತ್ತಿದ್ದಾರೆ ಎಂಬ ಪ್ರಶ್ನೆ ಇನ್ನೂ ಉತ್ತರವಿಲ್ಲದೇ ಉಳಿದಿದೆ. ಕಾನೂನು ಯಾವಾಗ ಎಲ್ಲರಿಗೂ ಸಮಾನವಾಗಲಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ಉನ್ನಾಂವ್ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಅಧಿಕಾರದ ದುರಹಂಕಾರದಿಂದ ಅಪರಾಧಿಗಳನ್ನು ಹೇಗೆ ರಕ್ಷಿಸಲಾಗಿದೆ ಮತ್ತು ಅದಕ್ಕಾಗಿ ಅತ್ಯಾಚಾರ ಸಂತ್ರಸ್ತೆ ತೆತ್ತ ಭಾರೀ ಬೆಲೆಯನ್ನು ಇಡೀ ದೇಶವೇ ಕಂಡಿದೆ ಎಂದಿದ್ದಾರೆ.
“ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಸಂಭವಿಸಿದ ಸಾವುಗಳಿರಲಿ ಅಥವಾ ಗುಜರಾತ್, ಹರ್ಯಾಣ ಹಾಗೂ ದಿಲ್ಲಿಯಲ್ಲಿ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪಗಳಿರಲಿ, ಎಲ್ಲೆಡೆಯೂ ರೋಗಭೀತಿಯ ವಾತಾವರಣ ಆವರಿಸಿದೆ” ಎಂದು ಅವರು ದೂರಿದ್ದಾರೆ.