ತಾಯಿಯ ಸಾವಿನಿಂದ ಖಿನ್ನತೆ; ಮನೆಯಲ್ಲಿ ಮೃತದೇಹದೊಂದಿಗೆ 9 ದಿನಗಳನ್ನು ಕಳೆದ ಇಬ್ಬರು ಪುತ್ರಿಯರು!
PC : timesofindia.indiatimes.com
ಹೈದರಾಬಾದ್: ತಮ್ಮ ತಾಯಿಯ ಸಾವಿನಿಂದ ಖಿನ್ನರಾಗಿ, ಆಕೆಯ ಮೃತದೇಹದೊಂದಿಗೆ ಇಬ್ಬರು ಯುವತಿಯರು ಒಂದು ವಾರ ತಮ್ಮ ಮನೆಯಲ್ಲಿ ಕಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 31ರಂದು ಅವರು ಪೊಲೀಸರ ಮೊರೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಜನವರಿ 23ರಂದು ಮಲಗಿದ್ದ 45 ವರ್ಷದ ತಾಯಿಯು ಎಷ್ಟು ಹೊತ್ತಾದರೂ ನಿದ್ರೆಯಿಂದ ಎಚ್ಚೆತ್ತಿಲ್ಲ ಹಾಗೂ ಆಕೆ ಮೃತಪಟ್ಟಿದ್ದಾಳೆ ಎಂಬುದು ಆಕೆಯ ನಾಡಿಮಿಡಿತ, ಉಸಿರಾಟ, ಹೃದಯ ಬಡಿತ ನಿಂತು ಹೋಗಿದ್ದರಿಂದ ಆಕೆಯ ಪುತ್ರಿಯರಿಗೆ ಅರಿವಾಗಿದೆ. ತಮ್ಮ ತಾಯಿಯ ಸಾವಿನಿಂದ ಖಿನ್ನತೆಗೊಳಗಾದ ಆ ಇಬ್ಬರು ಯುವತಿಯರು, ಅಂದಿನಿಂದ ತಮ್ಮ ಮನೆಯ ಬಾಗಿಲು ಹಾಕಿಕೊಂಡು ಒಳಗೇ ಉಳಿದಿದ್ದಾರೆ. ತೀರಾ ದೂರವಿದ್ದ ಅವರ ಮನೆಯಿಂದ ಕೊಳೆತ ವಾಸನೆ ಬಾರದೆ ಇದ್ದುದರಿಂದ ನೆರೆಹೊರೆಯವರಿಗೂ ಈ ಕುರಿತು ಸಂಶಯ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
22 ವರ್ಷ ಹಾಗೂ 25 ವರ್ಷದ ಪುತ್ರಿಯರು ಜನವರಿ 31ರ ಸಂಜೆ ಶಾಸಕರ ಶಿಬಿರದ ಕಚೇರಿಗೆ ತೆರಳಿ, ತಮ್ಮ ತಾಯಿಯ ಅಂತ್ಯಕ್ರಿಯೆ ನಡೆಸಲು ತಮ್ಮ ಬಳಿ ಹಣವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆಗ ಅವರಿಗೆ ಪೊಲೀಸರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ತಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪದವಿ ವ್ಯಾಸಂಗ ಮಾಡಿದ ನಂತರ, ಇಬ್ಬರು ಯುವತಿಯರು ಸೇಲ್ಸ್ ಗರ್ಲ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರ ತಂದೆ ಅವರನ್ನು ಹಲವಾರು ವರ್ಷಗಳ ಹಿಂದೆಯೇ ತೊರೆದು ಹೋಗಿದ್ದು, ಆತ ಎಲ್ಲಿದ್ದಾನೆ ಎಂದು ಯಾರಿಗೂ ತಿಳಿದಿಲ್ಲ. ಅಲ್ಲದೆ ಅವರಿಗೆ ಹತ್ತಿರದ ಸಂಬಂಧಿಗಳೂ ಇಲ್ಲ. ಅವರಿಗೆ ಆಪ್ತ ಸಮಾಲೋಚನೆ ನೆರವು ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.