ದಿಲ್ಲಿ | ಸೂಟ್ ಕೇಸ್ ನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಸೋದರ ಸಂಬಂಧಿ ಸೇರಿ ಇಬ್ಬರ ಬಂಧನ
PC : freepik.com
ಹೊಸ ದಿಲ್ಲಿ: 25 ವರ್ಷದ ಮಹಿಳೆಯೊಬ್ಬಳ ಶವವು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸೂಟ್ ಕೇಸ್ ಒಂದರಲ್ಲಿ ಪತ್ತೆಯಾಗಿರುವ ಘಟನೆ ಪೂರ್ವ ದಿಲ್ಲಿಯಲ್ಲಿ ನಡೆದಿದ್ದು, ಈ ಸಂಬಂಧ ಮಹಿಳೆಯ ಸೋದರ ಸಂಬಂಧಿ ಸೇರಿದಂತೆ ಇಬ್ಬರನ್ನು ಆಕೆಯ ಹತ್ಯೆಯ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆಯು ಸೋದರ ಸಂಬಂಧಿಯನ್ನು ತನ್ನ ಕುಟುಂಬ ತೊರೆದು ತನ್ನೊಂದಿಗೆ ಬರುವಂತೆ ಒತ್ತಡ ಹೇರುತ್ತಿದ್ದುದರಿಂದ, ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮಧ್ಯರಾತ್ರಿ ಅಂಬೇಡ್ಕರ್ ಚೌಕ ಹಾಗೂ ಕೇರಳ ಪಬ್ಲಿಕ್ ಶಾಲೆ ನಡುವಿನ ಶಿವಾಜಿ ರಸ್ತೆಯ ರಸ್ತೆ ಬದಿ ಸೂಟ್ ಕೇಸ್ ಒಳಗೆ ತುಂಬಿರುವ ಸುಟ್ಟಿರುವ ಶವವೊಂದು ಪತ್ತೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಮೃತ ಶಿಲ್ಪಾ ಪಾಂಡೆ, ತನ್ನ ಸೋದರ ಸಂಬಂಧಿ ಅಮಿತ್ ಶಾನನ್ನು ತನ್ನ ಕುಟುಂಬವನ್ನು ತೊರೆದು, ತನ್ನೊಂದಿಗೆ ಖಾಯಂ ಆಗಿ ವಾಸಿಸುವಂತೆ ಒತ್ತಡ ಹೇರುತ್ತಿದ್ದಳು ಎಂದು ಹೇಳಲಾಗಿದೆ. ಒಂದು ವೇಳೆ ತನ್ನ ಮಾತನ್ನೇನಾದರೂ ನಿರಾಕರಿಸಿದರೆ, ನಿನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಆತನಿಗೆ ಬೆದರಿಕೆ ಒಡ್ಡುತ್ತಿದ್ದಳು ಎಂದೂ ಆರೋಪಿಸಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸಲಾಗದೆ ಆರೋಪಿಗಳಿಬ್ಬರು ಆಕೆಯನ್ನು ಹತ್ಯೆಗೈಯ್ಯುವ ಯೋಜನೆ ರೂಪಿಸಿದ್ದಾರೆ. ಅವರು ಆಕೆಯ ಶವವನ್ನು ಸುಟ್ಟು ಹಾಕಿ, ಸಾಕ್ಷ್ಯವನ್ನು ನಾಶ ಮಾಡಲು ಸೂಟ್ ಕೇಸ್ ಒಂದರಲ್ಲಿ ವಿಸರ್ಜಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಆರೋಪಿಗಳಾದ ಅಮಿತ್ ಹಾಗೂ ಅನುಜ್ ಕಳೆದ ಆರೇಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಅವರಿಬ್ಬರೂ ವಿಚಾರಣೆಯ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದು, ಅಪರಾಧ ಕೃತ್ಯಕ್ಕೆ ಬಳಕೆಯಾದ ವಾಹನವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.