×
Ad

ದಿಲ್ಲಿ | ಬಸ್ ನಲ್ಲಿ ಆಹಾರ ಚೆಲ್ಲಿದ್ದಕ್ಕೆ ವ್ಯಕ್ತಿಯ ಥಳಿಸಿ ಹತ್ಯೆ: ಓರ್ವನ ಬಂಧನ

Update: 2025-02-10 14:38 IST

ಸಾಂದರ್ಭಿಕ ಚಿತ್ರ | PC :  freepik.com

ಹೊಸದಿಲ್ಲಿ: ಬಾಣಸಿಗನೊಬ್ಬ ಆಕಸ್ಮಿಕವಾಗಿ ಬಸ್ ನ ಆಸನದ ಮೇಲೆ ಆಹಾರ ಚೆಲ್ಲಿದ್ದಕ್ಕೆ ಬಸ್ ನ ಚಾಲಕ ಹಾಗೂ ಆತನ ಇಬ್ಬರು ಸಹಾಯಕರು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ವಾಯುವ್ಯ ದಿಲ್ಲಿಯ ಬವಾನಾದಲ್ಲಿ ನಡೆದಿದೆ.

ಆರೋಪಿಗಳು ಆತನ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ನಂತರ ಬವಾನಾ ಮೇಲ್ಸೇತುವೆಯಿಂದ ಕೆಳಕ್ಕೆಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಫೆಬ್ರವರಿ 1ರ ರಾತ್ರಿ ನಡೆದಿದ್ದು, ಮನೋಜ್ ಅಲಿಯಾಸ್ ಬಾಬು ಎಂದು ಗುರುತಿಸಲಾಗಿರುವ ಮೃತ ವ್ಯಕ್ತಿಯು ಸುಲ್ತಾನ್ ಪುರ್ ದಾಬಸ್ ನಲ್ಲಿ ವಿವಾಹ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತನ್ನ ಸಹೋದ್ಯೋಗಿ ದಿನೇಶ್ ರೊಂದಿಗೆ ಬಸ್ ಹತ್ತಿದ್ದಾರೆ. ಈ ವೇಳೆ ಒಂದಿಷ್ಟು ಆಹಾರವು ಆಕಸ್ಮಿಕವಾಗಿ ಆಸನದ ಮೇಲೆ ಚೆಲ್ಲಿದ್ದರಿಂದ, ಚಾಲಕ ಹಾಗೂ ಆತನ ಸಹಚರರು ಕುಪಿತಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಿನೇಶ್ ಗೆ ಬವಾನಾ ಚೌಕದಲ್ಲಿ ಇಳಿಯಲು ಅವಕಾಶ ನೀಡಿದರೂ, ಮನೋಜ್ ನನ್ನು ಹಿಡಿದಿಟ್ಟುಕೊಂಡಿರುವ ಮೂವರು ಆರೋಪಿಗಳು, ಅವರ ಮೇಲೆ ಹಲ್ಲೆ ನಡೆಸುವುದಕ್ಕೂ ಮುನ್ನ, ಆಸನವನ್ನು ಬಲವಂತವಾಗಿ ದಿನೇಶ್ ತಾವು ತೊಟ್ಟಿದ್ದ ಶರ್ಟ್ ನಿಂದ ಒರೆಸುವಂತೆ ಮಾಡಿದ್ದಾರೆ. ಆಶಿಶ್ ಅಲಿಯಾಸ್ ಅಶು ಎಂದು ಗುರುತಿಸಲಾಗಿರುವ ಚಾಲಕನು ತನ್ನ ಸಹಚರರೊಂದಿಗೆ ಬಾಬು ಅವರನ್ನು ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ, ಅವರ ಗುಪ್ತಾಂಗಗಳಿಗೆ ಕಬ್ಬಿಣದ ಸಲಾಕೆಯನ್ನು ತುರುಕಿದ್ದಾನೆ ಎಂದು ಆರೋಪಿಸಲಾಗಿದೆ.

ಮರುದಿನ ಬವಾನಾ ಮೇಲ್ಸೇತುವೆ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ವ್ಯಕ್ತಿಯೊಬ್ಬರ ಬಗ್ಗೆ ಪೊಲೀಸರು ಕರೆ ಸ್ವೀಕರಿಸಿದ್ದಾರೆ. ಆರಂಭದಲ್ಲಿ ದೇಹದ ಮೇಲೆ ಯಾವುದೇ ಕಾಣುವಂತಹ ಗಾಯದ ಗುರುತುಗಳಿಲ್ಲದೆ ಇದ್ದುದರಿಂದ ಪೊಲೀಸರು ಅವರನ್ನು ಅಲೆಮಾರಿ ಎಂದು ಶಂಕಿಸಿದ್ದಾರೆ. ಆದರೆ, ತನ್ನ ಸಹೋದರ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದ ದಿನೇಶ್ ಸಹೋದರ ಜಿತೇಂದ್ರರ ಮೂಲಕ ಅವರ ಗುರುತನ್ನು ಪತ್ತೆ ಹಚ್ಚಿದ್ದಾರೆ. ಫೆಬ್ರವರಿ 5ರಂದು ನಡೆದ ಮರಣೋತ್ತರ ಪರೀಕ್ಷೆಯಲ್ಲಿ ದೇಹದೊಳಗೆ ಹಲವು ಗಾಯಗಳಾಗಿರುವುದು ದೃಢಪಟ್ಟಿದೆ.

ಪೊಲೀಸರು ಮೂವರು ಆರೋಪಿಗಳ ಪೈಕಿ ಸುಶಾಂತ್ ಶರ್ಮ ಅಲಿಯಾಸ್ ಚುತ್ಕುಲಿ (24) ಎಂಬ ಓರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಆಶಿಶ್ ಹಾಗೂ ಮತ್ತೊಬ್ಬ ಅರೋಪಿಯ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News