ದಿಲ್ಲಿ ವಿಧಾನಸಭಾ ಚುನಾವಣೆ | ಆಮ್ ಆದ್ಮಿ ಪಕ್ಷವನ್ನು ಅಕ್ರಮ ಗಳಿಕೆಯ ಪಕ್ಷ ಎಂದು ವ್ಯಂಗ್ಯವಾಡಿದ ಅಮಿತ್ ಶಾ
ಅಮಿತ್ ಶಾ | PC : PTI
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷವು ‘ಆವೈಧ್ ಆಮದಾನಿ ಪಕ್ಷ’ (ಅಕ್ರಮ ಗಳಿಕೆಯ ಪಕ್ಷ) ಎಂಬ ಅಡ್ಡ ಹೆಸರಿನಲ್ಲಿ ವ್ಯಂಗ್ಯವಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆಸಿರುವ 10 ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮತ ಗಳಿಸಲು ಸುಳ್ಳುಗಳನ್ನು ಹರಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ ಎಂದೂ ಆರೋಪಿಸಿದ್ದಾರೆ.
ರವಿವಾರ ನರೇಲಾ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ದಿಲ್ಲಿಯಲ್ಲಿ ವಾಸಿಸುತ್ತಿರುವ ಪೂರ್ವಾಂಚಲಿಗಳ ವಿರುದ್ಧ ಹೇಳಿಕೆ ನೀಡುವ ಮೂಲಕ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷ ಅವರನ್ನು ಅವಮಾನಿಸುತ್ತಿದೆ. ಇದರೊಂದಿಗೆ, ಆಮ್ ಆದ್ಮಿ ಪಕ್ಷದ ಮೂಗಿನಡಿ ರಾಷ್ಟ್ರ ರಾಜ್ಯಧಾನಿಯಲ್ಲಿ ದುರಾಡಳಿತ ನಡೆಯುತ್ತಿದೆ ಎಂದೂ ವಾಗ್ದಾಳಿ ನಡೆಸಿದರು.
ಕಳೆದ 10 ವರ್ಷಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಆಡಳಿತ ಹದಗೆಟ್ಟಿದೆ ಎಂದು ದೂರಿದ ಅವರು, ಫೆಬ್ರವರಿ 8ರಂದು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಮ್ ಆದ್ಮಿ ಪಕ್ಷದ ದುರಾಡಳಿತ ಅಂತ್ಯಗೊಳ್ಳಲಿದೆ. ಕೇಜ್ರಿವಾಲ್, ನಿಮ್ಮ ಸರಕಾರ ಶೀಘ್ರದಲ್ಲಿಯೇ ಪತನವಾಗಲಿದೆ ಹಾಗೂ ಬಿಜೆಪಿಯು ಅಧಿಕಾರಕ್ಕೆ ಬರಲಿದೆ” ಎಂದು ಭವಿಷ್ಯ ನುಡಿದರು.
ನರೇಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ರಾಜ್ ಕರಣ್ ಖತ್ರಿ ಪರ ಅವರು ಪ್ರಚಾರ ಕೈಗೊಂಡಿದ್ದರು.