×
Ad

ದಿಲ್ಲಿಯಲ್ಲಿ ದಟ್ಟ ಮಂಜು: ವಿಮಾನಯಾನ,ರೈಲುಸಂಚಾರಕ್ಕೆ ವ್ಯತ್ಯಯ

Update: 2025-01-18 20:18 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ದಿಲ್ಲಿಯಲ್ಲಿ ಶನಿವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದು,ವಿಮಾನ ಮತ್ತು ರೈಲುಗಳ ಸಂಚಾರಕ್ಕೆ ವ್ಯಾಪಕ ವ್ಯತ್ಯಯವುಂಟಾಗಿತ್ತು. ಗೋಚರತೆಯು ಕಡಿಮೆಯಾಗಿದ್ದರಿಂದ ವಾಹನ ಸವಾರರಿಗೆ ಸವಾಲುಗಳು ಎದುರಾಗಿದ್ದು,ಸಾರಿಗೆ ಸೇವೆ ಅಸ್ತವ್ಯಸ್ತಗೊಂಡಿತ್ತು.

ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತವನ್ನು ದಟ್ಟ ಮಂಜು ಆವರಿಸಿಕೊಂಡಿದ್ದು, ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡಿದೆ.

ಮಂಜು ಕವಿದ ವಾತಾವರಣದಿಂದಾಗಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಸ್ಥಗಿತಗೊಂಡಿದ್ದು,ಹಲವಾರು ರೈಲುಗಳು ಮತ್ತು ವಿಮಾನಯಾನಗಳು ವಿಳಂಬಗೊಂಡಿದ್ದವು.

ದಟ್ಟ ಮಂಜಿನಿಂದಾಗಿ ಬೆಳಿಗ್ಗೆ ಆರು ಗಂಟೆಯವರೆಗೆ 47 ರೈಲುಗಳು ವಿಳಂಬವಾಗಿ ಚಲಿಸುತ್ತಿದ್ದವು. ಕಡಿಮೆ ಗೋಚರತೆಯು ಸಾರಿಗೆ ಸೇವೆಗಳಿಗೆ ಸವಾಲೊಡ್ಡಿದ್ದು,ಪ್ರಯಾಣಿಕರು ಅನಿಶ್ಚಿತತೆಯಲ್ಲಿ ತೊಳಲಾಡುವಂತಾಗಿತ್ತು.

ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ಪ್ರಕಾರ ಬೆಳಿಗ್ಗೆ 5:30 ಗಂಟೆಗೆ ತಾಪಮಾನ 11.2 ಡಿ.ಸೆ.ಗೆ ಕುಸಿದಿತ್ತು.

ಈ ನಡುವೆ,ಮಂಜಿನ ಹವಾಮಾನದ ಹೊರತಾಗಿಯೂ ದಿಲ್ಲಿಯ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆಯಾಗಿದ್ದು,248ರ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ದಾಖಲಾಗಿತ್ತು.

ತಾಪಮಾನ ಕುಸಿಯುತ್ತಿದ್ದಂತೆ ದಿಲ್ಲಿಯ ನಿರ್ವಸಿತರು ಚಳಿಯಿಂದ ಪಾರಾಗಲು ನೈಟ್ ಶೆಲ್ಟರ್‌ಗಳನ್ನು ಆಶ್ರಯಿಸಿದ್ದರು. ದಿಲ್ಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ ನಗರದಾದ್ಯಂತ ಸುಮಾರು 235 ಪಗೋಡಾ ಟೆಂಟ್‌ಗಳನ್ನು ಸ್ಥಾಪಿಸಿದೆ.

ಅತ್ತ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವನ್ನೂ ದಟ್ಟವಾದ ಮಂಜು ಆವರಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News