×
Ad

ಪಹಲ್ಗಾಮ್ ದಾಳಿಯನ್ನು ಪ್ರತಿಭಟಿಸಿ ದಿಲ್ಲಿ ವ್ಯಾಪಾರಿಗಳಿಂದ ಬಂದ್ ; 900ಕ್ಕೂ ಅಧಿಕ ಮಾರುಕಟ್ಟೆಗಳು ಸ್ಥಗಿತ

Update: 2025-04-25 21:50 IST

PC : PTI

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ವ್ಯಾಪಾರಿಗಳು ಶುಕ್ರವಾರ ‘ದಿಲ್ಲಿ ಬಂದ್’ಗೆ ಕರೆ ನೀಡಿದ್ದು, ಕನಾಟ್ ಪ್ಲೇಸ್, ಸದರ ಬಝಾರ್ ಮತ್ತು ಚಾಂದನಿ ಚೌಕ್‌ ನಂತಹ ಪ್ರಮುಖ ಶಾಪಿಂಗ್ ಕೇಂದ್ರಗಳು ಸೇರಿದಂತೆ ನಗರದ 900ಕ್ಕೂ ಅಧಿಕ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು.

ಜವಳಿ, ಮಸಾಲೆಗಳು, ಪಾತ್ರೆಗಳು ಮತ್ತು ಚಿನ್ನಬೆಳ್ಳಿಯಂತಹ ವಲಯಗಳ ವಿವಿಧ ವ್ಯಾಪಾರಿ ಸಂಘಗಳು ಸಹ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದವು.

ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ)ದ ಪ್ರಕಾರ ದಿಲ್ಲಿಯಲ್ಲಿ ಎಂಟು ಲಕ್ಷಕ್ಕೂ ಅಧಿಕ ಅಂಗಡಿಗಳು ಶುಕ್ರವಾರ ಮುಚ್ಚಿದ್ದು,ಇದರಿಂದ ಅಂದಾಜು 1,500 ಕೋಟಿ ರೂ.ಗಳ ವ್ಯಾಪಾರ ನಷ್ಟಗೊಂಡಿದೆ.

ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ(ಸಿಟಿಐ)ಯು ದಿಲ್ಲಿ ಬಂದ್‌ಗೆ ಕರೆ ನೀಡಿತ್ತು.

‘ಇದು ಕೇವಲ ಪ್ರತಿಭಟನೆಯಲ್ಲ,ಇದು ಭಯೋತ್ಪಾದನೆಯ ವಿರುದ್ಧ ಸಾಮೂಹಿಕ ನಿಲುವು ಕೂಡ ಆಗಿದೆ. ಈ ಹೋರಾಟದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಮತ್ತು ಪಹಲ್ಗಾಮ್‌ ನಲ್ಲಿ ಜೀವಗಳನ್ನು ಕಳೆದುಕೊಂಡವರ ಸ್ಮರಣಾರ್ಥ ಬಂದ್ ಆಚರಿಸುತ್ತಿದ್ದೇವೆ ’ ಎಂದು ಶುಕ್ರವಾರ ಇಲ್ಲಿ ಹೇಳಿದ ಸಿಟಿಐ ಅಧ್ಯಕ್ಷ ಬ್ರಿಜೇಶ ಗೋಯಲ್, ಪಾಕಿಸ್ತಾನದೊಂದಿಗೆ ಎಲ್ಲ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಮತ್ತು ಭಾರತದಲ್ಲಿ ಪಾಕಿಸ್ತಾನಿ ಉತ್ಪನ್ನಗಳಿಗೆ ಬಹಿಷ್ಕಾರವನ್ನು ಹೇರುವಂತೆ ಸರಕಾರವನ್ನು ಆಗ್ರಹಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News