×
Ad

ನಾಳೆ ದಿಲ್ಲಿಯ ನೂತನ ಸಿಎಂ ಆಯ್ಕೆ ಸಾಧ್ಯತೆ

Update: 2025-02-16 21:49 IST

PC : PTI 

ಹೊಸದಿಲ್ಲಿ: ದಿಲ್ಲಿಯ ನೂತನ ಮುಖ್ಯಮಂತ್ರಿಯ ಆಯ್ಕೆಗಾಗಿ ಬಿಜೆಪಿಯ ಶಾಸಕಾಂಗ ಪಕ್ಷವು ಸೋಮವಾರ ಸಭೆ ಸೇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಭರ್ಜರಿ ಗೆಲುವು ಸಾಧಿಸಿದ ಒಂದು ವಾರಕ್ಕೂ ಅಧಿಕ ಸಮಯದ ಬಳಿಕ ಅದರ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ಫ್ರಾನ್ಸ್ ಹಾಗೂ ಅಮೆರಿಕ ಪ್ರವಾಸದ ಹಿನ್ನೆಲೆಯಲ್ಲಿ ಬಿಜೆಪಿಯ ನೂತನ ಮುಖ್ಯಮಂತ್ರಿಯ ಆಯ್ಕೆಯಲ್ಲಿ ವಿಳಂಬವಾಗಿತ್ತು. ಪ್ರಧಾನಿ ಮೋದಿಯವರು ಶನಿವಾರ ದಿಲ್ಲಿಗೆ ವಾಪಸಾಗಿದ್ದಾರೆ. ದಿಲ್ಲಿ ಬಿಜೆಪಿಯ ಕಾರ್ಯಾಲಯದಲ್ಲಿ ಪಕ್ಷದ ಶಾಸಕರ ಸಭೆ ನಡೆಯುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.

26 ವರ್ಷಗಳ ದಿಲ್ಲಿ ವಿಧಾನಸಭೆಯ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುವ ಯೋಜನೆಯನ್ನು ಹೊಂದಿದೆ.

ಬಿಜೆಪಿಯ ಮಾಜಿ ಮುಖ್ಯಮಂತ್ರಿ ಸಾಹೇಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ, ದಿಲ್ಲಿ ಬಿಜೆಪಿಯ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ, ಹಿರಿಯ ನಾಯಕ ವಿಜೇಂದ್ರ ಗುಪ್ತಾ, ನೂತನ ಶಾಸಕ ಆಶೀಸ್‌ ಸೂದ್ ಹಾಗೂ ಉತ್ತಮ ನಗರ ಶಾಸಕ ಪವನ್ ಶರ್ಮಾ ಅವರು ಸಿಎಂ ಹುದ್ದೆಯ ರೇಸ್‌ ನಲ್ಲಿ ಮುಂಚೂಣಿಯಲ್ಲಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಮಹಿಳೆಯನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆಯೆಂದು ಮೂಲಗಳು ಸುಳಿವು ನೀಡಿವೆ. ನೀಲಂ ಪಹಲ್ವಾನ್, ರೇಖಾ ಗುಪ್ತಾ, ಪೂನಂ ಶರ್ಮಾ ಹಾಗೂ ಶಿಖಾ ರಾಯ್ ನೂತನವಾಗಿ ಆಯ್ಕೆಯಾದ ಬಿಜೆಪಿ ಶಾಸಕಿಯರು.

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 70 ಕ್ಷೇತ್ರಗಳ ಪೈಕಿ 48ರಲ್ಲಿ ಜಯಗಳಿಸಿದ್ದು, ಆಪ್ 22 ಸ್ಥಾನಗಳನ್ನು ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News