70 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ: ರಾಷ್ಟ್ರಪತಿ ಮುರ್ಮು
Update: 2024-06-27 16:45 IST
ರಾಷ್ಟ್ರಪತಿ ದ್ರೌಪದಿ ಮುರ್ಮು (Screengrab:X/ANI)
ಹೊಸದಿಲ್ಲಿ: ಎಪ್ಪತ್ತು ವರ್ಷ ಮೇಲ್ಪಟ್ಟ ಎಲ್ಲ ಭಾರತೀಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುವುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ 25,000 ಜನ ಔಷಧಿ ಕೇಂದ್ರಗಳ ಆರಂಭದ ಕೆಲಸವೂ ಪ್ರಗತಿ ಕಾಣುತ್ತಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.
ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆಯಡಿಯಲ್ಲಿ ದೇಶದ 55 ಕೋಟಿ ಫಲಾನುಭವಿಗಳಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
“ಈ ಕ್ಷೇತ್ರದಲ್ಲಿ ಸರ್ಕಾರ ಇನ್ನೊಂದು ನಿರ್ಧಾರ ಕೈಗೊಳ್ಳಲಿದೆ. ಈಗ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುವುದು,” ಎಂದು ಅವರು ಹೇಳಿದರು.