ನಕಲಿ ಎನ್‌ಕೌಂಟರ್ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರ
ಚಂಡಿಗಢ: ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮೊಹಾಲಿಯ ಸಿಬಿಐ ನ್ಯಾಯಾಲಯ ಪಂಜಾಬ್‌ನ ಮಾಜಿ ಪೊಲೀಸ್ ಅಧಿಕಾರಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಬಲ್ಜಿಂದರ್ ಸಿಂಗ್ ಸ್ರಾ ಅವರು ಆಗ ಅಮೃತಸರದ ಬಿಯಾಸ್ ಪೊಲೀಸ್ ಠಾಣೆಯ ಉಸ್ತುವಾರಿಯಾಗಿದ್ದ ಪರಮ್‌ಜೀತ್ ಸಿಂಗ್‌ಗೆ 50 ಸಾವಿರ ರೂ. ದಂಡವನ್ನು ಕೂಡ ವಿಧಿಸಿದ್ದಾರೆ.
ಸಿಂಗ್ (67) ಪೊಲೀಸ್ ವರಿಷ್ಠರಾಗಿ ನಿವೃತ್ತರಾಗಿದ್ದರು.
ನ್ಯಾಯಾಲಯ ಬುಧವಾರ ಈ ಆದೇಶ ನೀಡಿದೆ. ಈ ಪ್ರಕರಣದ ಇತರ ಆರೋಪಿಗಳಾಗಿರುವ ಆಗಿನ ಇನ್ಸ್‌ಪೆಕ್ಟರ್ ಧರಮ್ ಸಿಂಗ್ (77), ಆಗಿನ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಕಾಶ್ಮೀರ್ ಸಿಂಗ್ (69), ಆಗಿನ ಎಎಸ್‌ಐ ದರ್ಬರಾ ಸಿಂಗ್ (71) ಅನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇನ್ನೋರ್ವ ಆರೋಪಿ ಆಗಿನ ಸಬ್ ಇನ್ಸ್‌ಪೆಕ್ಟರ್ ರಾಮ್ ಲುಭಯಾ ಪ್ರಕರಣದ ವಿಚಾರಣೆ ಸಂದರ್ಭ ಮೃತಪಟ್ಟಿದ್ದಾನೆ.
ಬಾಬಾ ಬಕಲಾದ ಮುಚ್ಚಾಲ್ ಗ್ರಾಮದ ನಿವಾಸಿ ಕಾನ್ಸ್‌ಟೇಬಲ್ ಸುರ್ಮುಖ್ ಸಿಂಗ್ ಹಾಗೂ ಖಿಯಾಲಾ ಗ್ರಾಮದ ನಿವಾಸಿ ಕಾನ್ಸ್‌ಟೇಬಲ್ ಸುಖ್ವಿಂದರ್ ಸಿಂಗ್‌ನನ್ನು 1993 ಎಪ್ರಿಲ್ 18ರಂದು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅನಂತರ ಮಜಿತಾ ಪೊಲೀಸರು ಅವರಿಬ್ಬರು ಉಗ್ರರು ಎಂದು ಗುರುತಿಸಲಾಗಿದೆ. ಅವರು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ ಎಂದು ತಿಳಿಸಿದ್ದರು.