×
Ad

ಗುಜರಾತ್ | ಬುಡಕಟ್ಟು ಮಹಿಳೆಯ ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ

Update: 2025-01-31 21:27 IST

ಸಾಂದರ್ಭಿಕ ಚಿತ್ರ 

ಅಹ್ಮದಾಬಾದ್: ವಿವಾಹೇತರ ಸಂಬಂಧ ಶಂಕಿಸಿ 35 ವರ್ಷದ ಬುಡಕಟ್ಟು ಮಹಿಳೆಯನ್ನು ಆಕೆಯ ಮಾವನ ನೇತೃತ್ವದ ಗುಂಪು ಥಳಿಸಿ, ವಿವಸ್ತ್ರಗೊಳಿಸಿ, ಮೋಟಾರು ಸೈಕಲ್‌ಗೆ ಕಟ್ಟಿ ಮೆರವಣಿಗೆ ನಡೆಸಿದ ಆಘಾತಕಾರಿ ಘಟನೆ ಗುಜರಾತ್‌ನ ಧಲ್ಸಿಮಾಲ್ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ಜನವರಿ 28ರಂದು ಸಂಜೆಲಿ ತಾಲೂಕಿನ ಧಲ್ಸಿಮಾಲ್ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ರಾಜ್‌ದೀಪ್ ಸಿಂಗ್ ಝಾಲಾ ತಿಳಿಸಿದ್ದಾರೆ.

ಪೊಲೀಸರು 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇವರಲ್ಲಿ 12 ಮಂದಿಯನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಅಪಹರಣ, ಅಕ್ರಮ ಬಂಧನ, ಗೌರವಕ್ಕೆ ಧಕ್ಕೆ, ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ಆರೋಪದಲ್ಲಿ ಗುಂಪಿನಲ್ಲಿದ್ದವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘‘ನಾವು 12 ಮಂದಿಯನ್ನು ಬಂಧಿಸಿದ್ದೇವೆ. ಅವರಲ್ಲಿ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಹಾಗೂ ನಾಲ್ವರು ಅಪ್ರಾಪ್ತರು. ಘಟನೆಯ ನಂತರ ನಾವು ಎಚ್ಚೆತ್ತುಕೊಂಡೆವು. ಆಕೆಯ ಮಾವ ಆಕೆಯ ಮನೆಯಲ್ಲಿ ಕೂಡಿ ಹಾಕಿದ್ದ. ನಾವು ಬಿಡುಗಡೆ ಮಾಡಿದೆವು’’ ಎಂದು ಅವರು ತಿಳಿಸಿದ್ದಾರೆ.

ಎಫ್‌ಐಆರ್ ಪ್ರಕಾರ ಮಹಿಳೆ ಗ್ರಾಮದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆತನನ್ನು ಭೇಟಿಯಾಗಲು ತೆರಳಿದ ಸಂದರ್ಭ ಈ ಘಟನೆ ನಡೆದಿದೆ. ಮಾವ ಬಹಾದ್ದೂರ್ ದಾಮೋರ್ ಹಾಗೂ ಆಕೆಯ ಪತಿಯ ಸಹೋದರ ಸಂಜಯ್ ದಾಮೋರ್ ನೇತೃತ್ವದ ಗುಂಪು ಆತನ ಮನೆಗೆ ನುಗ್ಗಿತು ಹಾಗೂ ಆಕೆಗೆ ಹಲ್ಲೆ ನಡೆಸಿತು. ಆಕೆಯನ್ನು ವಿವಸ್ತ್ರಗೊಳಿಸಿತು. ಆಕೆಯ ಕೈಗಳನ್ನು ಸರಪಳಿಯಿಂದ ಬಿಗಿದು ಮೆರವಣಿಗೆ ನಡೆಸಿತು. ಅನಂತರ ಆಕೆಯನ್ನು ಮನೆಗೆ ಕರೆದೊಯ್ಯುವ ಮುನ್ನ ಮೋಟಾರು ಸೈಕಲ್‌ಗೆ ಕಟ್ಟಿ ಮುಖ್ಯ ರಸ್ತೆ ವರೆಗೆ ಎಳೆದೊಯ್ದಿತು. ಮನೆಗೆ ಕರೆದೊಯ್ದ ಬಳಿಕ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆ ಮುಂದುವರಿದಿದೆ. ಅವರು ಉಳಿದ ಶಂಕಿತರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News