ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಕುರಿತ ತೀರ್ಪು ಮರುಪರಿಶೀಲಿಸಲು ಕೋರಿ ಸುಪ್ರೀಂಕೋರ್ಟ್‌ಗೆ ಗುಜರಾತ್ ಸರ್ಕಾರ ಅರ್ಜಿ
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು
ಹೊಸದಿಲ್ಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಆಕೆಯ ಕುಟುಂಬದ 14 ಸದಸ್ಯರ ಹತ್ಯೆ ಪ್ರಕರಣದ 11 ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸಲು ಗುಜರಾತ್ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಜನವರಿ 8ರಂದು ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟಿನ ಕದ ತಟ್ಟಿದೆ.
ಈ ಪ್ರಕರಣದ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಕೆಲವೊಂದು ಅಭಿಪ್ರಾಯಗಳ ವಿರುದ್ಧ ಗುಜರಾತ್ ಸರ್ಕಾರ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಗುಜರಾತ್ ಸರ್ಕಾರ ಆರೋಪಿಗಳಿಗೆ ಬೇಕಿದ್ದಂತೆ ನಡೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ರಾಜ್ಯ ಸರ್ಕಾರಕ್ಕೆ ಬಹಳ ಘಾಸಿಯುಂಟು ಮಾಡಿದೆ ಎಂದು ತನ್ನ ಪುನರ್‌ಪರಿಶೀಲನಾ ಅರ್ಜಿಯಲ್ಲಿ ಗುಜರಾತ್ ಸರ್ಕಾರ ಹೇಳಿದೆ.
ಅಪರಾಧಿಗಳ ಶಿಕ್ಷೆ ಕಡಿತಗೊಳಿಸುವ ಕುರಿತಂತೆ ನಿರ್ಧರಿಸುವಂತೆ ಸುಪ್ರಿಂ ಕೋರ್ಟ್ ಮೇ 2022 ನಲ್ಲಿ ನೀಡಿದ್ದ ಆದೇಶಾನುಸಾರ ತನ್ನ ನಿರ್ಧಾರ ಕೈಗೊಂಡಿದ್ದು ತನ್ನ ವಿರುದ್ಧದ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ವಾಪಸ್ ಪಡೆದುಕೊಳ್ಳಬೇಕೆಂದು ಗುಜರಾತ್ ಸರ್ಕಾರ ಕೋರಿದೆ.