ಕಠಿಣ ಪರಿಶ್ರಮ, ಬಡವರಿಗಾಗಿನ ಸೇವೆ ಅವರನ್ನು ಇಲ್ಲಿಯವರೆಗೆ ಕರೆ ತಂದಿದೆ : ಸಿಜೆಐ ಬಿ.ಆರ್.ಗವಾಯಿಯ ತಾಯಿ ಹೇಳಿಕೆ
PC | PTI
ಅಮರಾವತಿ: ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವ ಮಾತ್ರ ನನ್ನ ಪುತ್ರ ನ್ಯಾ. ಭೂಷಣ್ ಗವಾಯಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರು ಇದನ್ನು ಬಡವರು ಹಾಗೂ ಅಗತ್ಯವಿರುವರಿಗೆ ಸೇವೆ ಸಲ್ಲಿಸುವ ಮೂಲಕ ಗಳಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯ ತಾಯಿ ಹೇಳಿದ್ದಾರೆ.
ಬುಧವಾರ ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಾಧೀಶರಾಗಿ ಬಿ.ಆರ್.ಗವಾಯಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಬಿ.ಅಸರ್.ಗವಾಯಿ ಅವರ ತಾಯಿ ಕಮಲ್ ತಾಯಿ ಗವಾಯಿ, ನನ್ನ ಪುತ್ರ ತನ್ನ ನೂತನ ಹುದ್ದೆಗೆ ಸಂಪೂರ್ಣ ನ್ಯಾಯ ಒದಗಿಸಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಹೇಳಿದ್ದಾರೆ.
ನ್ಯಾ. ಗವಾಯಿ ಅವರು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ನಿವಾಸಿಯಾಗಿದ್ದು, ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ನಾಯಕರೂ ಆಗಿದ್ದ ಹಾಗೂ ಬಿಹಾರ, ಕೇರಳ ಮತ್ತು ಸಿಕ್ಕಿನ ಮಾಜಿ ರಾಜ್ಯಪಾಲರಾದ ಆರ್.ಎಸ್. ಗವಾಯಿಯವರ ಪುತ್ರರಾಗಿದ್ದಾರೆ.
"ಓರ್ವ ತಾಯಿಯಾಗಿ, ನನ್ನ ಮಕ್ಕಳು ಅವರ ತಂದೆಯ ಹೆಜ್ಜೆ ಜಾಡನ್ನು ಅನುಸರಿಸಬೇಕು, ಸಮಾಜಕ್ಕೆ ಸೇವೆ ಸಲ್ಲಿಸಬೇಕು, ಜನರನ್ನು ಗೌರವದಿಂದ ಉಪಚರಿಸಬೇಕು ಹಾಗೂ ಜನರ ಅಂತಸ್ತನ್ನು ಲೆಕ್ಕಿಸದೆ, ಅವರಿಗೆ ನ್ಯಾಯ ನೀಡಬೇಕು ಎಂದು ನಾನು ಬಯಸುತ್ತೇನೆ. ಇದು ಪ್ರತಿಯೊಬ್ಬರ ಪಾಲಿಗೂ ಹರ್ಷ ಮತ್ತು ಸಂತೋಷದ ಕ್ಷಣವಾಗಿದೆ. ಯಾಕೆಂದರೆ, ಅವರು ತುಂಬಾ ಸಣ್ಣ ವಯಸ್ಸಿನಲ್ಲೇ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದ ಹಾಗೂ ತನಗೆದುರಾದ ಹಲವು ಸಮಸ್ಯೆಗಳನ್ನು ಹಿಮ್ಮೆಟ್ಟಿಸಿ, ಈ ಹಂತಕ್ಕೆ ತಲುಪಿದ್ದಾರೆ", " ಎಂದು ಕಮಲ್‌ತಾಯಿ ಗವಾಯಿ ಹೇಳಿದ್ದಾರೆ.
ನನ್ನ ಪುತ್ರ ಏಕಾಏಕಿ ಈ ಸ್ಥಾನಕ್ಕೆ ಏರಿಲ್ಲ :
ಬದಲಿಗೆ ಕಠಿಣ ಪರಿಶ್ರಮದಿಂದ ಈ ಹಂತ ತಲುಪಿದ್ದಾರೆ. ಆತ ಇಲ್ಲಿಯವರೆಗೆ ಏನೆಲ್ಲ ಸ್ಥಾನಗಳನ್ನು ಹೊಂದಿದ್ದ, ಅವಕ್ಕೆಲ್ಲ ಆತ ನ್ಯಾಯ ಸಲ್ಲಿಸಿದ್ದಾರೆ. ಆತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೂ ನ್ಯಾಯ ಸಲ್ಲಿಸಲಿದ್ದಾರೆ ಎಂಬ ನಂಬಿಕೆ ನನಗಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯಾ. ಗವಾಯಿ ಅಮರಾವತಿಯ ಸಾಧಾರಣ ಸ್ಥಳೀಯ ಶಾಲೆಯಲ್ಲಿ ತನ್ನ ಶಿಕ್ಷಣ ಪ್ರಾರಂಭಿಸಿದರು ಎಂದು ಅವರು ಸ್ಮರಿಸಿದ್ದಾರೆ.
"ಅವರು ಇಂದು ಸಾಧಿಸಿರುವ ಯಶಸ್ಸು ಹಾಗೂ ತಲುಪಿರುವ ಹುದ್ದೆಯ ಶ್ರೇಯಸ್ಸನ್ನು ಅವರ ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವಕ್ಕೆ ನೀಡಲು ಬಯಸುತ್ತೇನೆ. ಅವರು ತುಂಬಾ ಸಾಮಾಜಿಕ ಸೇವೆ ಮಾಡಿದ್ದಾರೆ. ಅಗತ್ಯವಿರುವ ಸಾಕಷ್ಟು ಮಂದಿಗೆ ಆರ್ಥಿಕ ನೆರವು ಹಾಗೂ ಅವರ ಆಸ್ಪತ್ರೆ ವೆಚ್ಚಗಳನ್ನು ಭರಿಸುವ ಮೂಲಕ ನೆರವಾಗಿದ್ದಾರೆ. ಬಡವರು ಹಾಗೂ ಅಗತ್ಯವಿರುವವರಿಗೆ ನೀಡಿದ ಸೇವೆಯಿಂದಾಗಿ ಈ ಸ್ಥಾನ ಪಡೆದಿದ್ದಾರೆ", ಎಂದು ತಮ್ಮ ಪುತ್ರನ ಸಾಧನೆಯ ಬಗ್ಗೆ ಕಮಲ್‌ತಾಯಿ ಗವಾಯಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪುತ್ರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶನಾದ ನಂತರ, ನೀವು ಅವರಿಂದ ಏನನ್ನು ನಿರೀಕ್ಷಿಸುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಮಲ್‌ತಾಯಿ ಗವಾಯಿ, "ಮುಖ್ಯ ನ್ಯಾಯಮೂರ್ತಿಯಾಗಿ ಅವರ ಕೆಲಸವು ದೇಶಕ್ಕೆ ನೆರವು ನೀಡಲಿದೆ. ಅವರ ನಿರ್ಣಯಗಳು ಜನರನ್ನು ಕೇಂದ್ರೀಕರಿಸಿರುತ್ತವೆ ಎಂಬುದು ನನ್ನ ಭಾವನೆ", ಎಂದು ಉತ್ತರಿಸಿದ್ದಾರೆ.