ಅಸ್ಸಾಂ ಎಸ್‌ಐಆರ್‌ನಲ್ಲಿ 4-5 ಲಕ್ಷ ಮಿಯಾಗಳ ಹೆಸರುಗಳನ್ನು ಅಳಿಸಲಾಗುವುದು: ಸಿಎಂ ಹಿಮಂತ ಬಿಸ್ವ ಶರ್ಮಾ
ಹಿಮಂತ ಶರ್ಮಾ | Photo Credit : PTI
ಗುವಾಹಟಿ,ಜ.27: ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಕೈಗೆತ್ತಿಕೊಂಡಾಗ ನಾಲ್ಕರಿಂದ ಐದು ಲಕ್ಷ ಮಿಯಾ ಮತದಾರರ ಹೆಸರುಗಳನ್ನು ಅಳಿಸಲಾಗುವುದು ಎಂದು ಮಂಗಳವಾರ ಇಲ್ಲಿ ತಿಳಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ,ಅವರಿಗೆ ತೊಂದರೆ ನೀಡುವುದು ತನ್ನ ಕೆಲಸವಾಗಿದೆ ಎಂದು ಹೇಳಿದರು.
ತಿನ್ಸುಕಿಯಾ ಜಿಲ್ಲೆಯ ದಿಗ್ಬೋಯಿಯಲ್ಲಿ ಸರಕಾರಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ,‘ವೋಟ್ ಚೋರಿ ಎಂದರೇನು? ಹೌದು, ನಾವು ಕೆಲವು ಮಿಯಾ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಅಸ್ಸಾಮಿನಲ್ಲಿ ಮತ ಚಲಾಯಿಸಲು ಬಿಡಬಾರದು. ಬಾಂಗ್ಲಾದೇಶದಲ್ಲಿ ಅವರು ಮತಗಳನ್ನು ಚಲಾಯಿಸಬೇಕು’ ಎಂದು ಹೇಳಿದರು.
‘ಅವರು ಅಸ್ಸಾಮಿನಲ್ಲಿ ಮತ ಚಲಾಯಿಸಲು ಸಾಧ್ಯವಾಗದಂತೆ ನಾವು ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೆ ಇದು ಪ್ರಾಥಮಿಕವಷ್ಟೇ. ಅಸ್ಸಾಮಿನಲ್ಲಿ ಎಸ್‌ಐಆರ್ ನಡೆಸುವಾಗ ನಾಲ್ಕರಿಂದ ಐದು ಲಕ್ಷ ಮಿಯಾ ಮತಗಳನ್ನು ಕಡಿತಗೊಳಿಸಬೇಕಾಗುತ್ತದೆ’ ಎಂದರು.
‘ಮಿಯಾ’ ಎನ್ನುವುದು ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಉದ್ದೇಶಿಸಿ ಅವಹೇಳನಕಾರಿ ಪದವಾಗಿದೆ. ಅಸ್ಸಾಮಿನ ಆಡಳಿತಾರೂಢ ಪಕ್ಷ ಬಿಜೆಪಿ ಈ ಸಮುದಾಯಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂಬ ಹಣೆಪಟ್ಟಿಯನ್ನು ಕಟ್ಟಿದ್ದು, ಅವರು ಸ್ಥಳೀಯ ಜನರ ಸಂಪನ್ಮೂಲಗಳು,ಉದ್ಯೋಗಗಳು ಮತ್ತು ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಬದಲಾಗಿ ಅಸ್ಸಾಮಿನಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯು ಎಸ್‌ಐಆರ್‌ನಂತೆ ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿಲ್ಲ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಮಾರ್ಚ್-ಎಪ್ರಿಲ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.
‘ಕಾಂಗ್ರೆಸ್ ನನ್ನನ್ನು ಎಷ್ಟು ಬೇಕಾದರೂ ನಿಂದಿಸಲಿ, ಆದರೆ ಮಿಯಾಗಳಿಗೆ ಸಂಕಷ್ಟವನ್ನುಂಟು ಮಾಡುವುದು ನನ್ನ ಕೆಲಸವಾಗಿದೆ’ ಎಂದು ಶರ್ಮಾ ಹೇಳಿದರು.
ಶರ್ಮಾರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಮನ್ ವದೂದ್ ಅವರು, ಮುಖ್ಯಮಂತ್ರಿಗಳು ಅಸ್ಸಾಮಿನಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯಾಗಿ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯಡಿ ಮಿಯಾಗಳಿಗೆ ಮಾತ್ರ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಹಿಂದುಗಳು ಅಥವಾ ಅಸ್ಸಾಮಿ ಮುಸ್ಲಿಮರಿಗೆ ಅಲ್ಲ ಎಂದು ಶರ್ಮಾ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದರು.