ದಿಢೀರನೆ ಹಿನ್ನೆಲೆ ಗಾಯನ ನಿಲ್ಲಿಸುವ ಘೋಷಣೆ ಮಾಡಿದ “ಕ್ಯೂಂಕಿ ತುಮ್ ಹಿ ಹೋ…” ಖ್ಯಾತಿಯ ಅರಿಜಿತ್ ಸಿಂಗ್!
ಖಾತೆ ಹ್ಯಾಕ್ ಆಗಿರಬಹುದೇ ಎಂದು ಶಂಕೆ ವ್ಯಕ್ತಪಡಿಸಿದ ಜನರು
ಅರಿಜಿತ್ ಸಿಂಗ್ | Photo : X \ arijitsingh
ಮುಂಬೈ: ಬಾಲಿವುಡ್ನ ಜನಪ್ರಿಯ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನದಿಂದ ನಿವೃತ್ತಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಸಂದೇಶದ ಮೂಲಕ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
“ನಮಸ್ಕಾರ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಇಷ್ಟು ವರ್ಷಗಳ ಕಾಲ ಕೇಳುಗರಾಗಿ ನನಗೆ ಅಪಾರ ಪ್ರೀತಿ ನೀಡಿದ್ದಕ್ಕಾಗಿ ನಿಮಗೆಲ್ಲ ಧನ್ಯವಾದಗಳು. ಇನ್ನು ಮುಂದೆ ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಸ್ವೀಕರಿಸುವುದಿಲ್ಲ. ನಾನು ಅದನ್ನು ನಿಲ್ಲಿಸುತ್ತಿದ್ದೇನೆ. ಇದು ಅದ್ಭುತ ಪ್ರಯಾಣವಾಗಿತ್ತು,” ಎಂದು ಅರಿಜಿತ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಅವರ ಈ ಘೋಷಣೆ ದೇಶಾದ್ಯಂತ ಸಂಗೀತ ಪ್ರೇಮಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದ್ದು, ಕೆಲವರು “ಖಾತೆ ಹ್ಯಾಕ್ ಆಗಿರಬಹುದೇ?” ಎಂದು ಅನುಮಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು “ಅರಿಜಿತ್ ಇಲ್ಲದೆ ಬಾಲಿವುಡ್ ಸಂಗೀತ ಅಪೂರ್ಣ” ಎಂದು ಪ್ರತಿಕ್ರಿಯಿಸಿದ್ದಾರೆ.
ಅರಿಜಿತ್ ಸಿಂಗ್ ಬಾಲಿವುಡ್ಗೆ ಅನೇಕ ಆತ್ಮಸ್ಪರ್ಶಿ ಹಾಗೂ ಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ. ಆಶಿಕಿ 2 ಚಿತ್ರದ ‘ತುಮ್ ಹಿ ಹೋ’ ಹಾಡು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ‘ಚನ್ನಾ ಮೆರೆಯಾ’, ‘ಫಿರ್ ಭಿ ತುಮ್ಕೋ ಚಾಹುಂಗಾ’, ‘ಹವಾಯೇನ್’ ಸೇರಿದಂತೆ ಹಲವು ಹಿಟ್ ಹಾಡುಗಳು ಅವರ ಗಾಯನ ಶೈಲಿಗೆ ಸಾಕ್ಷಿಯಾಗಿವೆ.
ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಅರಿಜಿತ್ ಸಿಂಗ್ ಅವರಿಗೆ 2025ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.