ಆಪರೇಶನ್ ಸಿಂಧೂರ ಬಗ್ಗೆ ಪಾಕ್‌ನಿಂದ ಸುಳ್ಳು ಪ್ರಚಾರ: ವಿಶ್ವಸಂಸ್ಥೆಯಲ್ಲಿ ಭಾರತ ಆಕ್ರೋಶ
Photo Credit : NDTV
ವಿಶ್ವಸಂಸ್ಥೆ,ಜ.26: ಭಾರತವು ಸೋಮವಾರ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಆಪರೇಶನ್ ಸಿಂಧೂರ್ ಬಗ್ಗೆ ಇಸ್ಲಾಮಾಬಾದ್ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಹಾಗೂ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಮತ್ತು ಭಯೋತ್ಪಾದನೆಯನ್ನು ಆಡಳಿತದ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಭದ್ರತಾಮಂಡಳಿ ಅಧಿವೇಶನದಲ್ಲಿ ಮಾತನಾಡುತ್ತಾ, ಕಳೆದ ವರ್ಷದ ಮೇನಲ್ಲಿ ಆಪರೇಶನ್ ಸಿಂಧೂರ ಕುರಿತಾಗಿ ಪಾಕಿಸ್ತಾನದ ರಾಯಭಾರಿಯವರು ಸುಳ್ಳು ಹಾಗೂ ಸ್ವಹಿತಾಸಕ್ತಿಯ ವಿವರಣೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
‘‘ ಈ ವಿಷಯದ ಕುರಿತಾದ ವಾಸ್ತವಾಂಶಗಳು ಸ್ಪಷ್ಟವಾಗಿವೆ. 2025ರ ಎಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಯೊಂದರಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು 26 ಅಮಾಯಕ ನಾಗರಿಕರನ್ನು ಹತ್ಯೆಗೈದಿದ್ದರು. ಈ ಘೋರ ಭಯೋತ್ಪಾದಕ ಕೃತ್ಯದ ಹಿಂದಿರುವ ಸೂತ್ರಧಾರಿಗಳು, ಸಂಘಟಕರು, ಆರ್ಥಿಕ ನೆರವು ನೀಡಿದವರು ಹಾಗೂ ಪ್ರಾಯೋಜಕರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಈ ಮಹಾನ್ ಸಂಸ್ಥೆ (ಭದ್ರತಾ ಮಂಡಳಿ) ಕರೆ ನೀಡಿತ್ತು. ನಾವು ಹಾಗೆಯೇ ಮಾಡಿದ್ದೇವೆ. ಭಾರತದ ಕ್ರಮಗಳು ವಿವೇಚನೆಯಿಂದ ಕೂಡಿದ್ದವು ಮತ್ತು ಸಂಘರ್ಷಾವಸ್ಥೆಯನ್ನು ಉಲ್ಬಣಿಸುವಂತಹದ್ದಾಗಿರಲಿಲ್ಲ ಅಲ್ಲದೆ ಜವಾಬ್ದಾರಿಯುತವಾಗಿದ್ದವು. ಭಯೋತ್ಪಾದಕರ ಮೂಸೌಕರ್ಯಗಳನ್ನು ನಾಶಪಡಿಸುವುದು ಹಾಗೂ ಉಗ್ರರನ್ನು ನಿಷ್ಕ್ರಿಯಗೊಳಿಸುವಂತಹದ್ದಾಗಿದ್ದವು ಎಂದು ಹರೀಶ್ ಹೇಳಿದರು.
ಕಳೆದ ವರ್ಷ ಆಪರೇಶನ್ ಸಿಂಧೂರ ನಡೆದ ಬಳಿಕ ಮೇ 9ರವರೆಗೂ ಪಾಕಿಸ್ತಾನವು ಭಾರತದ ಮೇಲೆ ದಾಳಿಗಳನ್ನು ನಡೆಸುವುದಾಗಿ ಬೆದರಿಕೆಗಳನ್ನು ಹಾಕುತ್ತಲೇ ಬಂದಿತ್ತು. ಆದರೆ ಮೇ 10ರಂದು ಪಾಕಿಸ್ತಾನ ಸೇನೆಯು ನಮ್ಮ ಸೇನೆಗೆ ನೇರವಾಗಿ ಕರೆ ಮಾಡಿ, ಕದನವನ್ನು ಕೊನೆಗೊಳಿಸುವಂತೆ ಗೋಗರೆದಿತ್ತು.
ಭಾರತ ಹಾಗೂ ಅದರ ಜನರಿಗೆ ಹಾನಿಯುಂಟು ಮಾಡುವ ಏಕೈಕ ಕಾರ್ಯಸೂಚಿಯನ್ನಷ್ಟೇ ಪಾಕಿಸ್ತಾನ ಹೊಂದಿದೆಯೆಂದು ಅವರು ಹೇಳಿದರು.
ಹರೀಶ್ ಪರ್ವತನೇನಿ ಭಾಷಣದ ಮುಖ್ಯಾಂಶಗಳು
‘‘ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಜಮ್ಮುಕಾಶ್ಮೀರವು ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯುವುದು’’ಎಂದರು.
ಸಿಂಧೂ ಜಲ ಒಪ್ಪಂದ ಏರ್ಪಟ್ಟ ಆರೂವರೆ ದಶಕಗಳುದ್ದಕ್ಕೂ ಪಾಕಿಸ್ತಾನವು, ಭಾರತದ ಮೇಲೆ ಮೂರು ಯುದ್ಧಗಳನ್ನು ಹಾಗೂ ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಒಪ್ಪಂದದ ಆಶಯವನ್ನು ಉಲ್ಲಂಘಿಸಿದೆ. ಪಾಕ್ ಪ್ರಾಯೋಜಿತ ಭಯೋತ್ಪಾದನೆಗಳಿಂದಾಗಿ ಸಾವಿರಾರು ಅಮಾಯಕ ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ.
ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾದ ಪಾಕಿಸ್ತಾನವು ಗಡಿಯಾಚೆಗಿನ ಹಾಗೂ ಇತರ ಎಲ್ಲಾ ರೀತಿಯ ಭಯೋತ್ಪಾದನೆಗೆ ಬೆಂಬಲವನ್ನು ಶಾಶ್ವತವಾಗಿ ಕೊನೆಗೊಳಿಸುವ ತನಕ ಭಾರತವು ಪಾಕಿಸ್ತಾನದ ಜೊತೆ ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿದಿದೆ.