“ಮಧ್ಯಪ್ರಾಚ್ಯದ ಶೇಖ್‌ಗಳಿಗೆ ರೆಡ್ ಕಾರ್ಪೆಟ್ ಹಾಸುವವರು, ದರ್ಗಾ ಧ್ವಂಸಗೊಳಿಸುವುದನ್ನು ಉಲ್ಲಾಸದಿಂದ ವೀಕ್ಷಿಸಿದರು”: ಬಿಜೆಪಿ ನಾಯಕರ ವಿರುದ್ಧ ಮೆಹಬೂಬಾ ಮುಫ್ತಿ ವಾಗ್ದಾಳಿ
ಮೆಹಬೂಬಾ ಮುಫ್ತಿ | Photo Credit : PTI
ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮಂಗಳವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದ ಶೇಖ್‌ಗಳಿಗೆ ರೆಡ್ ಕಾರ್ಪೆಟ್ ಹಾಸುವ ಬಿಜೆಪಿ ನಾಯಕರು, ಸೂಫಿ ಕವಿ ಬಾಬಾ ಬುಲ್ಲೆ ಶಾಹ್ ದರ್ಗಾ ಧ್ವಂಸಗೊಳ್ಳುವಾಗ ಉಲ್ಲಾಸದಿಂದ ನೋಡುತ್ತಾರೆ ಎಂದು ಆರೋಪಿಸಿದರು.
ಜನವರಿ 24ರಂದು ಮಸ್ಸೂರಿಯಲ್ಲಿರುವ ಬಾಬಾ ಬುಲ್ಲೆಹ್ ಷಾ ಅವರ ದರ್ಗಾವನ್ನು ಬಲಪಂಥೀಯ ಕಾರ್ಯಕರ್ತರು ಧ್ವಂಸ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಮೆಹಬೂಬ ಮುಫ್ತಿ, ಬಿಜೆಪಿ ನಾಯಕರು ವಿದೇಶಗಳ ಮಸೀದಿಗಳಲ್ಲಿ ಪೋಸ್ ನೀಡುತ್ತಾರೆ. ಮತ್ತು ಮಧ್ಯಪ್ರಾಚ್ಯದ ಶೇಖ್‌ಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಾರೆ. ಆದರೆ ಇಲ್ಲಿ ಸೂಫಿ ಕವಿ ಬಾಬಾ ಬುಲ್ಲೆ ಶಾಹ್ ಅವರ ದರ್ಗಾ ಧ್ವಂಸಗೊಳ್ಳುವುದನ್ನು ಉಲ್ಲಾಸದಿಂದ ವೀಕ್ಷಿಸುತ್ತಾರೆ ಎಂದು ಬರೆದಿದ್ದಾರೆ.
ಕೇಸರಿ ಪಕ್ಷವು ಉದ್ದೇಶಪೂರ್ವಕವಾಗಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಈ ಬೂಟಾಟಿಕೆ ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿದೆ. ಹೆಚ್ಚುತ್ತಿರುವ ಬಡತನ, ಸಾಮೂಹಿಕ ನಿರುದ್ಯೋಗ ಮತ್ತು ಯುವ ಪೀಳಿಗೆಯಿಂದ ಭವಿಷ್ಯ ಕಸಿದಿರುವ ಬಗ್ಗೆ ಉತ್ತರಿಸುವುದಕ್ಕಿಂತ ಸಾಮರಸ್ಯವನ್ನು ನಾಶಮಾಡುವುದು ಸುಲಭ ಎಂದು ಅವರು ಬಿಜೆಪಿಯನ್ನು ಟೀಕಿಸಿದರು.