ರಾಜ್ಯ ವಕೀಲರ ಪರಿಷತ್‌ಗಳಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಕೋರಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಜ.27: ಸರ್ವೋಚ್ಚ ನ್ಯಾಯಾಲಯವು ರಾಜ್ಯ ವಕೀಲರ ಪರಿಷತ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಕೀಲರಿಗೆ ಮೀಸಲಾತಿಯನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಮಂಗಳವಾರ ನಿರಾಕರಿಸಿದೆ.
ರಾಜ್ಯ ವಕೀಲರ ಪರಿಷತ್‌ಗಳಿಗೆ ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ಬಳಿಕ ಎಸ್‌ಸಿ/ಎಸ್‌ಟಿಗಳಿಗೆ ಪ್ರಾತಿನಿಧ್ಯವನ್ನು ಕೋರಿ ಅರ್ಜಿಯನ್ನು ತಡವಾಗಿ ಸಲ್ಲಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಮತ್ತು ಜಾಯಮಾಲ್ಯ ಬಾಗ್ಚಿ ಅವರ ಪೀಠವು ಬೆಟ್ಟು ಮಾಡಿತು.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ರಾಜ್ಯ ವಕೀಲರ ಪರಿಷತ್‌ಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶವನ್ನು ತಮ್ಮ ವಾದಗಳಿಗೆ ಆಧಾರವಾಗಿಸಿಕೊಂಡಿದ್ದರು.
ರಾಮಕುಮಾರ್ ಗೌತಮ ಸೇರಿದಂತೆ ಅರ್ಜಿದಾರರ ಪರ ವಕೀಲರು 1951ರ ವಕೀಲರ ಕಾಯ್ದೆಯು ಮಹಿಳಾ ಮೀಸಲಾತಿ ಅಥವಾ ಪ್ರಾತಿನಿಧ್ಯ ವಿಷಯದಲ್ಲಿ ಮೌನವಾಗಿದ್ದರೂ ರಾಜ್ಯ ವಕೀಲರ ಪರಿಷತ್‌ಗಳಲ್ಲಿ ಮಹಿಳಾ ನ್ಯಾಯವಾದಿಗಳ ಪ್ರಾತಿನಿಧ್ಯದ ಕುರಿತು ಆದೇಶಗಳನ್ನು ಹೊರಡಿಸಲಾಗಿದೆ ಎಂದು ವಾದಿಸಿದರು.
‘ನ್ಯಾಯಾಂಗದಲ್ಲಿ, ವಕೀಲರಲ್ಲಿ, ಸಂಸತ್ತಿನಲ್ಲಿ...ನೀವು ಎಲ್ಲೆಡೆಯೂ ಇದ್ದೀರಿ. ವಕೀಲರ ಪರಿಷತ್ 1961ರಿಂದಲೂ ಅಸ್ತಿತ್ವದಲ್ಲಿದೆ ಮತ್ತು ನೀವು ಏನನ್ನೂ ಮಾಡಲಿಲ್ಲ. ಸರ್ವೋಚ್ಚ ನ್ಯಾಯಾಲಯವು ಮಹಿಳೆಯರಿಗಾಗಿ ಏನೋ ಒಂದನ್ನು ಮಾಡಿದೆ ಎಂಬ ಕಾರಣಕ್ಕಾಗಿ ನೀವು ಈಗ ಬಂದಿದ್ದೀರಿ! ನೀವು ಮೀಸಲಾತಿಯನ್ನು ಹರಿವಾಣದಲ್ಲಿಟ್ಟು ನೀಡಬೇಕು ಎಂದು ಬಯಸಿದ್ದೀರಿ’ ಎಂದು ನ್ಯಾ.ಸೂರ್ಯಕಾಂತ್ ಹೇಳಿದರು.
ಹಿಂದಿನ ನಿರ್ದೇಶನಗಳ ವ್ಯಾಪ್ತಿಯನ್ನು ಸ್ಪಷ್ಟಪಡಿಸಿದ ಅವರು, ಪೀಠವು ಮಹಿಳೆಯರಿಗೆ ಮೀಸಲಾತಿಯನ್ನು ಮಂಜೂರು ಮಾಡಿಲ್ಲ, ಆದರೆ ದೀರ್ಘಕಾಲದ ಪ್ರಾತಿನಿಧ್ಯ ಕೊರತೆಯನ್ನು ಪರಿಹರಿಸಲು ಅವರ ‘ಪ್ರಾತಿನಿಧ್ಯ’ವನ್ನು ಮಾತ್ರ ಕಡ್ಡಾಯಗೊಳಿಸಿದೆ ಎಂದು ತಿಳಿಸಿದರು.