ಯುದ್ಧ ಪ್ರಚೋದಿಸಲು ಪಹಲ್ಗಾಮ್ ದಾಳಿ ಸಂಯೋಜಿಸಿದ್ದ ಆಸಿಮ್ ಮುನೀರ್: ಇಮ್ರಾನ್ ಖಾನ್ ಆಪ್ತ ಸಲ್ಮಾನ್ ಹೇಳಿಕೆ
ಆಸಿಮ್ ಮುನೀರ್ | Photo Credit : indiatoday.in
ಇಸ್ಲಮಾಬಾದ್, ಡಿ.4: ಪಾಕಿಸ್ತಾನಿ-ಅಮೆರಿಕನ್ ರಾಜಕೀಯ ಕಾರ್ಯಕರ್ತ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟವರ್ತಿ ಸಲ್ಮಾದ್ ಅಹ್ಮದ್ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಭಾರತದೊಂದಿಗೆ ಮಿಲಿಟರಿ ಘರ್ಷಣೆಯನ್ನು ಪ್ರಚೋದಿಸಲು ಮತ್ತು ಮುಖಾಮುಖಿಯಿಂದ ಲಾಭ ಪಡೆಯಲು ಪಹಲ್ಗಾಮ್ ದಾಳಿಯನ್ನು ಆಯೋಜಿಸಲಾಗಿದೆ ಎಂದಿದ್ದಾರೆ.
ಮುನೀರ್ ಅವರ ನಡವಳಿಕೆ ಮತ್ತು ಆಪಾದಿತ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪರಿಶೀಲಿಸುವಂತೆ ವಿದೇಶಾಂಗ ಇಲಾಖೆಯನ್ನು ಒತ್ತಾಯಿಸಿ ಅಮೆರಿಕಾದ 42 ಸಂಸದರು ಸಹಿ ಹಾಕಿದ ಪತ್ರದ ಬಗ್ಗೆ ನಡೆದ ಚರ್ಚೆಯಲ್ಲಿ ಅಹ್ಮದ್ ಈ ಪ್ರತಿಪಾದನೆ ಮಾಡಿದ್ದಾರೆ.
2022ರ ಎಪ್ರಿಲ್‍ನಲ್ಲಿ ಇಮ್ರಾನ್ ಖಾನ್‍ರನ್ನು ಪದಚ್ಯುತಗೊಳಿಸಿದಂದಿನಿಂದ ಪಾಕಿಸ್ತಾನದ ಮಿಲಿಟರಿ ವ್ಯವಸ್ಥೆಯು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂದು ಪಾಕಿಸ್ತಾನಿ-ಅಮೆರಿಕನ್ ಗುಂಪುಗಳು ವರ್ಷಗಳಿಂದ ಅಮೆರಿಕಾ ಆಡಳಿತಕ್ಕೆ ಎಚ್ಚರಿಕೆ ನೀಡುತ್ತಾ ಬಂದಿವೆ. ಮುನೀರ್ ಈ ವಲಯಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಸಲ್ಮಾನ್ ಅಹ್ಮದ್‍ರನ್ನು ಉಲ್ಲೇಖಿಸಿ ಸಿಎನ್‍ಎನ್-ನ್ಯೂಸ್18 ವರದಿ ಮಾಡಿದೆ. ಪಾಕಿಸ್ತಾನವು ಪರಮಾಣು ಶಸ್ತ್ರ ರಾಷ್ಟ್ರವಾಗಿದೆ. ಇಲ್ಲಿ ಮಿಲಿಟರಿ ಸರಕಾರ, ಸರ್ವಾಧಿಕಾರಿ ಇರಬಾರದು. ಆಸಿಮ್ ಮುನೀರ್ ಓರ್ವ ಮಾನಸಿಕವಾಗಿ ಗೊಂದಲದ ವ್ಯಕ್ತಿ. ಅವರು ನಿವೃತ್ತರಾಗಿದ್ದರಿಂದ ಸಶಸ್ತ್ರ ಪಡೆಯ ನೇತೃತ್ವ ವಹಿಸಬಾರದು. ಅವರು ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ, ಈ ವಲಯಕ್ಕೇ ಅಪಾಯಕಾರಿಯಾಗಿದ್ದಾರೆ ಎಂದು ಅಹ್ಮದ್ ಆರೋಪಿಸಿದ್ದಾರೆ.