×
Ad

ಇತಿಹಾಸದಲ್ಲೇ ಪ್ರಥಮ ಬಾರಿಗೆ ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಮಹಿಳಾ ನ್ಯಾಯಾಧೀಶೆ ಪ್ರಮಾಣ ವಚನ

Update: 2024-07-11 21:52 IST

ನ್ಯಾ. ಆಲಿಯಾ ನೀಲುಮ್ | PC : X

ಲಾಹೋರ್: ಲಾಹೋರ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಆಲಿಯಾ ನೀಲುಮ್ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.‌ ಆ ಮೂಲಕ ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಹಿಳಾ ನ್ಯಾಯಾಧೀಶೆಯೊಬ್ಬರು ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದಂತಾಗಿದೆ.

ನ್ಯಾ. ಆಲಿಯಾ ನೀಲುಮ್ ಅವರಿಗೆ ಪಂಜಾಬ್ ರಾಜ್ಯಪಾಲ ಸರ್ದಾರ್ ಸಲೀಮ್ ಹೈದರ್ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಪಂಜಾಬ್ ಪ್ರಾಂತ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿ ‌ಮರ್ಯಮ್ ನವಾಝ್ ಕೂಡಾ ಉಪಸ್ಥಿತರಿದ್ದರು.

57 ವರ್ಷದ ನ್ಯಾ. ಆಲಿಯಾ ನೀಲುಮ್ ಲಾಹೋರ್ ಹೈಕೋರ್ಟಿನ ಜ್ಯೇಷ್ಠತಾ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದರು. ಆದರೆ, ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಖಾಝಿ ಪಯಾಝ್ ಇಸಾ ನೇತೃತ್ವದ ನ್ಯಾಯಾಂಗ ಆಯೋಗವು ನ್ಯಾ. ಆಲಿಯಾ ನೀಲುಮ್ ಅವರನ್ನೇ ಲಾಹೋರ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನಾಮಕರಣ ಮಾಡಲು ತೀರ್ಮಾನಿಸಿತು ಎನ್ನಲಾಗಿದೆ.

ನವೆಂಬರ್ 12, 1966ರಲ್ಲಿ ಜನಿಸಿದ ಆಲಿಯಾ ನೀಲುಮ್, 1995ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದಿದ್ದರು. 1996ರಲ್ಲಿ ವಕೀಲಿಕೆ ವೃತ್ತಿಗೆ ನೋಂದಾಯಿಸಿಕೊಂಡಿದ್ದರು.

2008ರಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್‌ನ ವಕೀಲೆಯಾಗಿ ನೋಂದಾಯಿಸಿಕೊಂಡಿದ್ದ ಅವರು, ಮಾರ್ಚ್ 16, 2015ರಂದು ಖಾಯಂ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ, 2013ರಲ್ಲಿ ಲಾಹೋರ್ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News