×
Ad

ನನ್ನ ವಿರುದ್ಧ ದೈಹಿಕ ಹಲ್ಲೆಗೆ ಪ್ರಚೋದನೆ ; ದಾನಿಶ್‌ ಅಲಿ ಆರೋಪ

Update: 2023-09-24 19:02 IST

Photo- PTI

ಹೊಸದಿಲ್ಲಿ: ನನ್ನ ವಿರುದ್ಧ ದೈಹಿಕ ಹಲ್ಲೆ ನಡೆಸಲು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಪ್ರಚೋದನೆಯನ್ನು ನೀಡುತ್ತಿದ್ದಾರೆ ಎಂದು ಬಿಎಸ್‌ಪಿ ಸಂಸದ ದಾನಿಶ್‌ ಅಲಿ ಆರೋಪಿಸಿದ್ದಾರೆ.

ದಾನಿಶ್‌ ಅಲಿ ವಿರುದ್ಧ ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ನೀಡಿರುವ ಜನಾಂಗೀಯ ನಿಂದನೆಯ ಹೇಳಿಕೆ ವಿವಾದದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, “ದಾನಿಶ್‌ ಅಲಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಜಾತಿ ನಿಂದನೆಯನ್ನು ಮಾಡಿದ್ದಾರೆ, ಇದರಿಂದ ರೊಚ್ಚಿಗೆದ್ದ ಸಂಸದ ಬಿಧುರಿ ಅವರು ದಾನಿಶ್‌ ಅಲಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.

"ರಮೇಶ್ ಬಿಧೂರಿ ಅವರು ಲೋಕಸಭೆಯಲ್ಲಿ ನೀಡಿದ ಹೇಳಿಕೆಯನ್ನು ಯಾವುದೇ ಸುಸಂಸ್ಕೃತ ಸಮಾಜವು ಸರಿ ಎಂದು ಒಪ್ಪಿಕೊಳ್ಳುವುದಿಲ್ಲ. ಆದರೆ ದಾನಿಶ್‌ ಅಲಿ ಅವರ ಅಸಭ್ಯ ಮಾತುಗಳು ಮತ್ತು ನಡವಳಿಕೆಯ ಬಗ್ಗೆಯೂ ಲೋಕಸಭೆ ಸ್ಪೀಕರ್ ತನಿಖೆ ಮಾಡಬೇಕು" ಎಂದು ದುಬೆ ಟ್ವೀಟ್‌ ಮಾಡಿದ್ದಾರೆ.

“ಲೋಕಸಭೆಯ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ, ನಿಗದಿತ ಸಮಯದಲ್ಲಿ ಸಂಸದರಿಗೆ ಅಡ್ಡಿಪಡಿಸುವುದು, ಕುಳಿತು ಮಾತನಾಡುವುದು ಕೂಡಾ ಶಿಕ್ಷೆಯ ವ್ಯಾಪ್ತಿಗೆ ಬರುತ್ತದೆ, ನಾನು ಕಳೆದ 15 ವರ್ಷಗಳಿಂದ ಸಂಸದನಾಗಿ ಸದನದಲ್ಲಿಯೇ ಇದ್ದೇನೆ. ನಾನು ಅಂತಹ ದಿನವನ್ನು ನೋಡುವೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ” ಎಂದು ದುಬೆ ಪೋಸ್ಟ್ ಮಾಡಿದ್ದಾರೆ.

ದುಬೆ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಲಿ, ಬಿಜೆಪಿ ಸಂಸದರ ಹೇಳಿಕೆಯ ಹಿಂದೆ, ನನ್ನ ಮೇಲೆ ದೈಹಿಕ ಹಲ್ಲೆಗೆ ಪ್ರಚೋದಿಸುವ ಗುರಿಯಿದೆ, ಯಾಕೆಂದರೆ ಈಗಾಗಲೇ ಮೌಖಿಕ ಹಲ್ಲೆ ನನ್ನ ಮೇಲೆ ಆಗಿದೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ನನ್ನ ಮೇಲೆ ಮಾತಿನ ದಾಳಿ ಈಗಾಗಲೇ ಆಗಿರುವುದರಿಂದ ದೈಹಿಕ ದಾಳಿ ನಡೆಸುವ ನಿರೂಪಣೆಯನ್ನು ನಿರ್ಮಿಸುವ ಉದ್ದೇಶದಿಂದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ನನ್ನ ವಿರುದ್ಧ ಪತ್ರ ಬರೆದಿದ್ದಾರೆ ಎಂದು ಅಲಿ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಚರ್ಚೆಯ ಸಂದರ್ಭದಲ್ಲಿ, ಬಿಧೂರಿ ಅವರು ಬಿಎಸ್‌ಪಿ ಸಂಸದ ದಾನಿಶ್‌ ಅಲಿ ಯನ್ನು ಭಯೋತ್ಪಾದಕ, ಮುಲ್ಲಾ ಎಂದು ಕರೆದು ಜನಾಂಗೀಯ ನಿಂದನೆಯನ್ನು ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News