ದೇಶದಲ್ಲಿ ಜನಾಂಗೀಯತೆ, ಕೋಮು ಹಿಂಸಾಚಾರ ಹೆಚ್ಚಳ; ಪ್ರಧಾನಿ ಮೋದಿಗೆ ಹಾಟ್‌ಮೇಲ್‌ನ ಸಹ–ಸಂಸ್ಥಾಪಕ ಸಬೀರ್ ಭಾಟಿಯಾರಿಂದ ಮುಕ್ತ ಪತ್ರ
ದಲಿತರು, ಮುಸ್ಲಿಮರು ಈಶಾನ್ಯ ಜನರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ
ಸಬೀರ್ ಭಾಟಿಯಾ | Photo Credit : PTI
ಹೊಸದಿಲ್ಲಿ: ಹಾಟ್ ಮೇಲ್ ನ ಸಹ–ಸಂಸ್ಥಾಪಕ ಸಬೀರ್ ಭಾಟಿಯಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಕ್ತ ಪತ್ರ ಬರೆದು, ಭಾರತದಲ್ಲಿ ಹೆಚ್ಚುತ್ತಿರುವ ಜನಾಂಗೀಯತೆ ಹಾಗೂ 'ಗುರುತಿನ' ಆಧಾರಿತ ಹಿಂಸಾಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈಶಾನ್ಯ ಭಾರತದ ಜನರು, ಮುಸ್ಲಿಮರು, ದಲಿತರು ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುತ್ತಿರುವ ದಾಳಿಗಳು ದೇಶದ ಸಾಮಾಜಿಕ ಬುನಾದಿಗೆ ಗಂಭೀರ ಸವಾಲಾಗಿವೆ ಎಂದು ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿಯನ್ನು ಉದ್ದೇಶಿಸಿ ಬರೆದಿರುವ ಈ ಪತ್ರವನ್ನು ಭಾಟಿಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡೆಹ್ರಾಡೂನ್ ನಲ್ಲಿ ತ್ರಿಪುರಾದ 24 ವರ್ಷದ ಎಂಬಿಎ ವಿದ್ಯಾರ್ಥಿ ಅಂಜೆಲ್ ಚಕ್ಮಾ ಹತ್ಯೆ ಪ್ರಕರಣವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದು, ಜನಾಂಗೀಯ ಪ್ರೇರಿತ ವಾಗ್ವಾದದ ಬಳಿಕ ಈ ಹತ್ಯೆ ನಡೆದಿದೆ ಎಂದು ತಿಳಿಸಿದ್ದಾರೆ. ಈ ಘಟನೆಯನ್ನು “ಭಾರತದ ಆತ್ಮಕ್ಕೆ ಸಂಭವಿಸಿದ ದುರಂತ” ಎಂದು ವರ್ಣಿಸಿರುವ ಭಾಟಿಯಾ, ವಿಭಿನ್ನವಾಗಿ ಕಾಣುತ್ತಿದ್ದ ಕಾರಣಕ್ಕೆ ಮಾತ್ರ ಯುವ ವಿದ್ಯಾರ್ಥಿಯೊಬ್ಬರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಜಾಗತಿಕವಾಗಿ ಭಾರತವನ್ನು ಪ್ರತಿನಿಧಿಸಿರುವ ಭಾರತೀಯನಾಗಿ ಬರೆಯುತ್ತಿರುವುದಾಗಿ ಹೇಳಿರುವ ಭಾಟಿಯಾ, ಈಶಾನ್ಯ ಭಾರತದ ಜನರು ಗುರುತು, ಇತಿಹಾಸ ಮತ್ತು ಭಾವನೆಯಲ್ಲಿ ಶೇಕಡಾ ನೂರು ಭಾರತೀಯರಾಗಿದ್ದರೂ ಸಹ, ದೀರ್ಘಕಾಲದಿಂದ ಸ್ಟೀರಿಯೊಟೈಪಿಂಗ್ ಹಾಗೂ ಜನಾಂಗೀಯತೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಂಜೆಲ್ ಚಕ್ಮಾ ಅವರ ಸಾವು ಒಂದು ಪ್ರತ್ಯೇಕ ಅಪರಾಧವಲ್ಲ; ತುರ್ತು ರಾಷ್ಟ್ರೀಯ ಗಮನ ಅಗತ್ಯವಿರುವ ಆಳವಾದ ಸಾಮಾಜಿಕ ಸಮಸ್ಯೆಯ ಪ್ರತಿಬಿಂಬವಾಗಿದೆ ಎಂದು ಅವರು ವಾದಿಸಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ದಲಿತರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮೇಲಿನ ಹಿಂಸಾಚಾರದಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಭಾಟಿಯಾ, ಯಾವುದೇ ಸಮುದಾಯದ ಮೇಲೆ ದ್ವೇಷದಿಂದ ನಡೆಸಲ್ಪಡುವ ದಾಳಿಗಳು ಭಾರತದ ಕಲ್ಪನೆ ಮತ್ತು ಅದರ ಮೂಲ ಮೌಲ್ಯಗಳ ಮೇಲಿನ ನೇರ ದಾಳಿಗೆ ಸಮಾನವೆಂದು ಹೇಳಿದ್ದಾರೆ.
“ಸಂತ್ರಸ್ತರು ಈಶಾನ್ಯದವರಾಗಿರಲಿ, ದಲಿತರಾಗಿರಲಿ, ಮುಸ್ಲಿಂ ಆಗಿರಲಿ, ಕ್ರಿಶ್ಚಿಯನ್ ಆಗಿರಲಿ ಅಥವಾ ಯಾವುದೇ ಇತರ ಸಮುದಾಯದವರಾಗಿರಲಿ ಸಂದೇಶವು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿರಬೇಕು: ಕೋಮು ದ್ವೇಷ ತಪ್ಪು, ಜನಾಂಗೀಯತೆ ತಪ್ಪು, ಮತ್ತು ಗುರುತಿನ ಆಧಾರದ ಮೇಲೆ ಜನರನ್ನು ಗುರಿಯಾಗಿಸಿಕೊಳ್ಳುವುದು ನಿಲ್ಲಬೇಕು” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಭಾರತದ ವೈವಿಧ್ಯತೆಯೇ ಅದರ ಅತಿದೊಡ್ಡ ಶಕ್ತಿ ಎಂದು ಒತ್ತಿ ಹೇಳಿರುವ ಭಾಟಿಯಾ, ವಿಭಿನ್ನ ಭಾಷೆಗಳು, ಸಂಸ್ಕೃತಿಗಳು ಮತ್ತು ನಂಬಿಕೆಗಳನ್ನು ಹೊಂದಿರುವ 1.4 ಶತಕೋಟಿ ಜನರು ಒಂದೇ ರಾಷ್ಟ್ರೀಯ ಗುರುತನ್ನು ಹಂಚಿಕೊಳ್ಳುತ್ತಾರೆ ಎಂಬ ಅಂಶದಲ್ಲೇ ದೇಶದ ಬಲ ಅಡಗಿದೆ ಎಂದು ತಿಳಿಸಿದ್ದಾರೆ. ವೈವಿಧ್ಯತೆಯೇ ಹಿಂಸಾಚಾರಕ್ಕೆ ಕಾರಣವಾಗುವ ಹಂತಕ್ಕೆ ಭಾರತ ತಲುಪಿದರೆ, ಅದು ತನ್ನ ಮೂಲ ಮೌಲ್ಯಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಜನಾಂಗೀಯತೆ ಮತ್ತು ಕೋಮು ಹಿಂಸಾಚಾರವನ್ನು ಖಂಡಿಸುವ ಸ್ಪಷ್ಟ ರಾಷ್ಟ್ರೀಯ ಹೇಳಿಕೆಯನ್ನು ನೀಡಬೇಕು, ಅಂಜೆಲ್ ಚಕ್ಮಾ ಹತ್ಯೆ ಪ್ರಕರಣದ ಕುರಿತು ಪಾರದರ್ಶಕ ಹಾಗೂ ಸಮಯಬದ್ಧ ತನಿಖೆ ನಡೆಯುವುದನ್ನು ಖಚಿತಪಡಿಸಬೇಕು. ಅಂತರ್–ಸಮುದಾಯ ದ್ವೇಷವನ್ನು ನಿವಾರಿಸಲು ರಾಷ್ಟ್ರವ್ಯಾಪಿ ಸಂವೇದನಾಶೀಲತಾ ಕಾರ್ಯಕ್ರಮ ಆರಂಭಿಸಬೇಕು ಹಾಗೂ ದ್ವೇಷ ಅಪರಾಧಗಳ ವಿರುದ್ಧ ಕಾನೂನು ರಕ್ಷಣೆಗಳನ್ನು ಬಲಪಡಿಸಬೇಕು ಎಂದು ಭಾಟಿಯಾ ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದ್ದಾರೆ.
“ಭಾರತದಲ್ಲಿ ಯಾವುದೇ ಪೋಷಕರು, ಅದು ತ್ರಿಪುರ, ಉತ್ತರ ಪ್ರದೇಶ, ಕೇರಳ ಅಥವಾ ನಾಗಾಲ್ಯಾಂಡ್ ನವರಾಗಿರಲಿ, ತಮ್ಮ ಮಗುವಿನ ಜೀವಕ್ಕೆ ಅವರ ಗುರುತಿನ ಕಾರಣದಿಂದಾಗಿ ಭಯಪಡಬೇಕಾದ ಸ್ಥಿತಿ ಇರಬಾರದು. ಜಾಗತಿಕ ನಾಯಕತ್ವವನ್ನು ಬಯಸುವ ದೇಶದಲ್ಲಿ ಇಂತಹ ಭಯಗಳಿಗೆ ಸ್ಥಾನವಿಲ್ಲ” ಎಂದು ಅವರು ಹೇಳಿದ್ದಾರೆ.
ಪತ್ರದ ಕೊನೆಯಲ್ಲಿ, ಜನರನ್ನು ಸಂಪರ್ಕಿಸುವ ಸಾಧನಗಳನ್ನು ನಿರ್ಮಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟಿರುವ ಭಾರತೀಯ ಹಾಗೂ ತಂತ್ರಜ್ಞನಾಗಿ, ಸಮಾಜವು ಸಹಾನುಭೂತಿ ಮತ್ತು ಏಕತೆಯಿಂದ ದೂರ ಸರಿಯುತ್ತಿರುವ ಸಂದರ್ಭದಲ್ಲಿ ನಾನು ಮೌನವಾಗಿರಲು ಸಾಧ್ಯವಿಲ್ಲ ಎಂದು ಭಾಟಿಯಾ ತಿಳಿಸಿದ್ದಾರೆ. ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ದೇಶವು “ಪ್ರಾಮಾಣಿಕತೆ ಮತ್ತು ಧೈರ್ಯದಿಂದ” ಈ ಸಮಸ್ಯೆಯನ್ನು ಎದುರಿಸಲಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿರುವ ಅವರು, ಅಂಜೆಲ್ ಚಕ್ಮಾ ಅವರ ಸಾವು ನ್ಯಾಯ ಮತ್ತು ಸಾಮಾಜಿಕ ಸುಧಾರಣೆಗೆ ಮಹತ್ವದ ತಿರುವಾಗಲಿ ಎಂದು ಆಶಿಸಿದ್ದಾರೆ.