×
Ad

ಕೆಂಪುಕೋಟೆ ಸ್ಫೋಟ ಪ್ರಕರಣ | ಪಾಕಿಸ್ತಾನಿ ಏಜೆಂಟ್‌ ಗಳನ್ನು ಸಂಪರ್ಕಿಸಲು ʼghostʼ ಸಿಮ್ ಬಳಕೆ: ವರದಿ

Update: 2026-01-04 23:48 IST

CREDIT:timesofindia

ಹೊಸದಿಲ್ಲಿ, ಜ.4: ನ. 10ರಂದು ನಡೆದ ಕೆಂಪುಕೋಟೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳನ್ನು ಸಂಪರ್ಕಿಸಲು ʼghostʼ ಸಿಮ್ ಕಾರ್ಡ್‌ಗಳು ಹಾಗೂ ಎನ್‌ಕ್ರಿಪ್ಟ್ ಮಾಡಲಾದ ಸಂವಹನ ಆ್ಯಪ್‌ ಗಳನ್ನು ಬಳಸಿದ್ದರೆಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಪಡೆದ ಸುಶಿಕ್ಷಿತ ವೈದ್ಯರೂ ಸೇರಿ ಹಲವು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ತನಿಖೆಯಲ್ಲಿ ಬೆಳಕಿಗೆ ಬಂದ ಮಾಹಿತಿಯ ಆಧಾರದಲ್ಲಿ, ದೂರಸಂಪರ್ಕ ಇಲಾಖೆಯು ಕಳೆದ ವರ್ಷದ ನವೆಂಬರ್ 28ರಂದು ಮಹತ್ವದ ನಿರ್ದೇಶನ ಹೊರಡಿಸಿದ್ದು, ವಾಟ್ಸ್‌ಆ್ಯಪ್, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಆ್ಯಪ್ ಆಧಾರಿತ ಸಂವಹನ ಸೇವೆಗಳು ಮೊಬೈಲ್ ಫೋನ್‌ನಲ್ಲಿರುವ ಭೌತಿಕ ಸಿಮ್ ಕಾರ್ಡ್‌ಗೆ ನಿರಂತರವಾಗಿ ಸಂಪರ್ಕ ಹೊಂದಿರಬೇಕು ಎಂದು ಸೂಚಿಸಿದೆ.

ಭದ್ರತಾ ಸಂಸ್ಥೆಗಳ ಕಣ್ತಪ್ಪಿಸಲು ಮುಝಮ್ಮಿಲ್ ಗ್ಯಾನೀ, ಅದೀಲ್ ರಾಥರ್ ಸೇರಿದಂತೆ ಆರೋಪಿಗಳು ‘ಡ್ಯುಯಲ್ ಫೋನ್’ ತಂತ್ರವನ್ನು ಬಳಸಿಕೊಂಡಿದ್ದರು. ಇವರು ʼghostʼ ಸಿಮ್ ಕಾರ್ಡ್‌ಗಳನ್ನು ಅಂತರ್ಜಾಲ ತಾಣಗಳ ಮೂಲಕ ಪಡೆದುಕೊಂಡಿದ್ದರು ಎಂದು ತನಿಖೆಯ ವೇಳೆ ಗೊತ್ತಾಗಿದೆ.

ಕೆಂಪುಕೋಟೆ ಸಮೀಪ ಸ್ಫೋಟಕ ಸಾಧನಗಳನ್ನು ಹೊತ್ತೊಯ್ಯುತ್ತಿದ್ದಾಗ ಮೃತಪಟ್ಟ ಡಾ. ಉಮರ್ ಉನ್ ನಬಿ ಸೇರಿದಂತೆ ಪ್ರತಿಯೊಬ್ಬ ಆರೋಪಿಯೂ ಎರಡು ಅಥವಾ ಮೂರು ಮೊಬೈಲ್ ಫೋನ್‌ಗಳನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ದಿನನಿತ್ಯದ ಖಾಸಗಿ ಹಾಗೂ ವೃತ್ತಿಪರ ಬಳಕೆಗೆ ಸ್ವಂತ ಹೆಸರಿನಲ್ಲಿ ಖರೀದಿಸಿದ ಸಿಮ್ ಬಳಸುತ್ತಿದ್ದ ಆರೋಪಿಗಳು, ಮತ್ತೊಂದು ಸಿಮ್ ಅನ್ನು ‘ಉಕಾಸ’, ‘ಫೈಝಾನ್’, ‘ಹಶ್ಮಿ’ ಎಂಬ ನಾಮಧೇಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಏಜೆಂಟ್‌ಗಳನ್ನು ಸಂಪರ್ಕಿಸಲು ಬಳಸಿದ್ದರು.

ಈ ʼghostʼ ಸಿಮ್ ಕಾರ್ಡ್‌ಗಳನ್ನು ಸಂಶಯಕ್ಕೆ ಒಳಗಾಗದ ನಾಗರಿಕರ ಆಧಾರ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಖರೀದಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ, ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ವಿತರಿಸುತ್ತಿದ್ದ ಪ್ರತ್ಯೇಕ ಜಾಲವನ್ನೂ ಜಮ್ಮು–ಕಾಶ್ಮೀರ ಪೊಲೀಸರು ಭೇದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News