Venezuela ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್
ಎಡಪಕ್ಷಗಳಿಂದ ಅಮೆರಿಕದ ಆಕ್ರಮಣ ನಡೆಗೆ ಖಂಡನೆ
ಜೈರಾಮ್ ರಮೇಶ್ | Photo Credit : PTI
ಹೊಸದಿಲ್ಲಿ, ಜ.4: ವೆನೆಝುವೆಲಾಕ್ಕೆ ಸಂಬಂಧಿಸಿದಂತೆ ಅಮೆರಿಕ ಕೈಗೊಂಡ ಕ್ರಮಗಳ ಕುರಿತು ಕಾಂಗ್ರೆಸ್ ರವಿವಾರ ಗಂಭೀರ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ಅಮೆರಿಕದ ‘ಆಕ್ರಮಣ’ವನ್ನು ಬಲವಾಗಿ ಖಂಡಿಸಿರುವ ಎಡಪಕ್ಷಗಳು, ವೆನೆಝುವೆಲಾದಲ್ಲಿನ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಯು ದಾಳಿಯ ಹಿಂದಿನ ‘ನಿಜವಾದ ಉದ್ದೇಶಗಳನ್ನು’ ಬಹಿರಂಗಪಡಿಸಿದೆ ಎಂದು ಹೇಳಿವೆ.
ಕಾಂಗ್ರೆಸ್ ಮತ್ತು ಸಿಪಿಎಂನಂತಹ ಪಕ್ಷಗಳು ವೆನೆಝುವೆಲಾದಲ್ಲಿನ ಬೆಳವಣಿಗೆಗಳಿಗೆ ಮೋದಿ ಸರಕಾರ ನೀಡಿರುವ ಪ್ರತಿಕ್ರಿಯೆಯನ್ನೂ ಟೀಕಿಸಿವೆ. ಸರಕಾರದ ಹೇಳಿಕೆಯಲ್ಲಿ ಅಮೆರಿಕದ ಹೆಸರನ್ನೇ ಉಲ್ಲೇಖಿಸಲಾಗಿಲ್ಲ ಎಂದು ಅವು ಆರೋಪಿಸಿವೆ.
ವೆನೆಝುವೆಲಾದಲ್ಲಿ ಅಮೆರಿಕ ಕೈಗೊಂಡ ಕ್ರಮಗಳ ಕುರಿತು ಕಾಂಗ್ರೆಸ್ ಗಂಭೀರ ಕಳವಳ ವ್ಯಕ್ತಪಡಿಸುತ್ತದೆ. ಅಂತರರಾಷ್ಟ್ರೀಯ ಕಾನೂನಿನ ಸ್ಥಾಪಿತ ನೀತಿಗಳನ್ನು ಏಕಪಕ್ಷೀಯವಾಗಿ ಉಲ್ಲಂಘಿಸಲು ಯಾರಿಗೂ ಹಕ್ಕಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ನೀವು ಎಷ್ಟು ಕೆಳಮಟ್ಟಕ್ಕೆ ತಲೆಯನ್ನು ಬಗ್ಗಿಸುತ್ತೀರಿ?’ ಎಂದು ಪ್ರಶ್ನಿಸಿರುವ ಸಿಪಿಎಂ, ಟ್ರಂಪ್ ಅವರ ನಿರ್ಲಜ್ಜ ಸಾಮ್ರಾಜ್ಯಶಾಹಿ ಅಮೆರಿಕದ ಆಕ್ರಮಣವನ್ನು ಖಂಡಿಸುವುದಿರಲಿ, ಅದನ್ನು ಟೀಕಿಸಲೂ ಸಾಧ್ಯವಾಗದೆ ಮೋದಿ ಸರಕಾರ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದೆ.
‘ಚುನಾಯಿತ ಅಧ್ಯಕ್ಷರ ಅಪಹರಣ, ಸಾರ್ವಭೌಮ ದೇಶದ ಬಲವಂತದ ಸ್ವಾಧೀನ, ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ, ಜಗತ್ತಿನ ಕಣ್ಣೆದುರೇ ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುವ ಕ್ರಮ, ತೈಲವನ್ನು ವಶಪಡಿಸಿಕೊಳ್ಳುವ ಬಹಿರಂಗವಾಗಿ ಘೋಷಿತ ಅಜೆಂಡಾ’ ಎಂದು ಸಿಪಿಎಂ ಅಮೆರಿಕದ ‘ಆಕ್ರಮಣ’ವನ್ನು ಬಣ್ಣಿಸಿದೆ.
ವಿದೇಶಾಂಗ ಸಚಿವಾಲಯ ಹೊರಡಿಸಿರುವ ಹೇಳಿಕೆಯಲ್ಲಿ ಅಮೆರಿಕದ ಹೆಸರನ್ನೂ ಉಲ್ಲೇಖಿಸಲಾಗಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಅಮೆರಿಕದ ಆಕ್ರಮಣವನ್ನು ಖಂಡಿಸಿರುವ ವಿಶ್ವದ ವಿವಿಧ ದೇಶಗಳೊಂದಿಗೆ ಧ್ವನಿಗೂಡಿಸುವಂತೆ ಹಾಗೂ ವೆನೆಝುವೆಲಾವನ್ನು ದೃಢವಾಗಿ ಬೆಂಬಲಿಸುವಂತೆ ಮೋದಿ ಸರಕಾರವನ್ನು ಆಗ್ರಹಿಸಿರುವ ಎಡಪಕ್ಷಗಳು, ಅಮೆರಿಕದ ಆಕ್ರಮಣದ ವಿರುದ್ಧ ಹಾಗೂ ಲ್ಯಾಟಿನ್ ಅಮೆರಿಕದ ಜನತೆಯೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ ನೀಡಿವೆ.
ಅಮೆರಿಕದ ಕ್ರಮವು ವಿಶ್ವಸಂಸ್ಥೆಯ ಸನ್ನದನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದರ ಜೊತೆಗೆ, ಸಾರ್ವಭೌಮ ದೇಶದ ವಿರುದ್ಧದ ದಾಳಿಯಾಗಿದೆ ಎಂದು ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಬೇಬಿ (ಸಿಪಿಎಂ), ಡಿ. ರಾಜಾ (ಸಿಪಿಐ), ದೀಪಂಕರ ಭಟ್ಟಾಚಾರ್ಯ (ಸಿಪಿಐ–ಎಂಎಲ್‌ಎಲ್), ಜಿ. ದೇವರಾಜನ್ (ಎಐಎಫ್‌ಬಿ) ಹಾಗೂ ಮನೋಜ ಭಟ್ಟಾಚಾರ್ಯ (ಆರ್‌ಎಸ್‌ಪಿ) ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.