×
Ad

Kerala | ‘ಆರ್ಯರೂ ವಲಸಿಗರೇ’: ಕ್ರೈಸ್ತ–ಇಸ್ಲಾಂಗೆ ‘ವಿದೇಶಿ ಧರ್ಮ’ ಎನ್ನುವ ವಾದಕ್ಕೆ ಮಲಂಕರ ಚರ್ಚ್ ಮುಖ್ಯಸ್ಥರ ತೀವ್ರ ವಿರೋಧ

Update: 2026-01-05 00:13 IST
photo credit: thenewsminute

ಕೊಟ್ಟಾಯಂ: ಕ್ರೈಸ್ತ ಧರ್ಮ ಹಾಗೂ ಇಸ್ಲಾಂ ಧರ್ಮಗಳನ್ನು ‘ವಿದೇಶಿ ಧರ್ಮಗಳು’ ಎಂದು ಬಿಂಬಿಸುವ ಪ್ರವೃತ್ತಿಗೆ ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಚರ್ಚ್ ಮುಖ್ಯಸ್ಥ ಬಸೆಲಿಯೋಸ್ ಮಾರ್ಥೋಮ ಮ್ಯಾಥ್ಯೂಸ್ III ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಇತಿಹಾಸವನ್ನು ಗಮನಿಸಿದರೆ ಆರ್ಯರೂ ಕೂಡ ವಲಸಿಗರೇ” ಎಂದು ಅವರು ಹೇಳಿದ್ದಾರೆ.

ಜ.2ರಂದು ಕೊಟ್ಟಾಯಂ ಜಿಲ್ಲೆಯ ಪನಯಂಪಾಲದಲ್ಲಿರುವ ಸೆಂಟ್ ಮೇರಿ ಚರ್ಚ್‌ ನಲ್ಲಿ ಹಬ್ಬದ ಸಂದೇಶ ನೀಡುವ ವೇಳೆ ಅವರು ಈ ಹೇಳಿಕೆ ನೀಡಿದರು. ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ಹಿಂಸಾಚಾರಗಳ ಕುರಿತು ಮಾತನಾಡಿದ ಅವರು, ಈ ಸಂಬಂಧ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದರು.

“ಇಂದು ಕ್ರೈಸ್ತ ಸಮುದಾಯದ ವಿರುದ್ಧ ದಾಳಿಗಳನ್ನು ನಾವು ಎದುರಿಸುತ್ತಿದ್ದೇವೆ. ಇದರ ಕುರಿತು ಸಮಾಜದಲ್ಲಿ ಸರಿಯಾದ ಜಾಗೃತಿ ಮೂಡಿಸುವುದು ಅತ್ಯಾವಶ್ಯಕ. ಅತ್ಯಂತ ತಪ್ಪು ವಿಧಾನದಲ್ಲಿ, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ ನಂತಹ ಆರೆಸ್ಸೆಸ್ ಅಂಗಸಂಸ್ಥೆಗಳು ಕ್ರೈಸ್ತರು ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿವೆ. ಇದು ಸತ್ಯ” ಎಂದು ಅವರು ಹೇಳಿದರು.

ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು, ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. “ನನ್‌ ಗಳ ನಂತರ ಈಗ ಪಾದ್ರಿಗಳ ಸರದಿ ಎಂಬ ಮಾತು ಕೇಳಿಬರುತ್ತಿದೆ. ಚರ್ಚ್ ಹೊರಗೆ ಕ್ರಿಸ್‌ಮಸ್ ಆಚರಣೆ ಕೆಡಿಸಿದ ಬಳಿಕ, ಚರ್ಚ್ ಒಳಗೆ ಪ್ರವೇಶಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಮುಂದಿನ ದಾಳಿಗಳು ಚರ್ಚ್ ಒಳಗಿನ ಪೂಜೆಯ ಮೇಲೆಯೇ ಆಗಬಹುದೆಂದು ನಾವು ನಿರೀಕ್ಷಿಸಬೇಕಾಗಿದೆ” ಎಂದು ಹೇಳಿದರು.

ಸಾಂವಿಧಾನಿಕ ಭರವಸೆಗಳನ್ನು ಒತ್ತಿ ಹೇಳಿದ ಅವರು, ತೀವ್ರಗಾಮಿ ಘಟಕಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ ಎಂದರು. “ಪ್ರತಿಯೊಂದು ಧರ್ಮವೂ ಸತ್ಯ, ನ್ಯಾಯ ಮತ್ತು ಪ್ರೀತಿಯ ಸಂದೇಶವನ್ನು ನೀಡುತ್ತದೆ. ಆದರೆ ಯಾವುದೇ ಧರ್ಮದಲ್ಲೂ ಮತಾಂಧರು ಇರಬಹುದು. ದೇಶವನ್ನು ಆಳುವವರು ತಮ್ಮ ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೆ ಮತಾಂಧರನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊತ್ತಿರಬೇಕು. ನಮಗೆಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ನಮ್ಮ ಆಚರಣೆಗಳನ್ನು ಪಾಲಿಸುವ ಹಕ್ಕಿದೆ” ಎಂದು ಅವರು ಹೇಳಿದರು.

►ಕ್ರೈಸ್ತರು–ಮುಸ್ಲಿಮರು ಇಲ್ಲಿಯವರೇ

ಕ್ರಿಸ್‌ಮಸ್ ಪ್ರದರ್ಶನಗಳ ಮೇಲಿನ ದಾಳಿಗಳ ಸಂದರ್ಭದಲ್ಲಿನ ಘೋಷಣೆಗಳನ್ನು ಉಲ್ಲೇಖಿಸಿದ ಅವರು, ಕೆಲವು ಧರ್ಮಗಳನ್ನು ಭಾರತಕ್ಕೆ ‘ವಿದೇಶಿ’ ಎಂದು ಕರೆಯುವ ವಾದವನ್ನು ತಿರಸ್ಕರಿಸಿದರು. “ಇತಿಹಾಸವನ್ನು ತಿಳಿದಿರುವ ಯಾರಿಗೂ ಈ ವಾದ ತಪ್ಪು ಎಂಬುದು ಸ್ಪಷ್ಟ. ಭಾರತದಲ್ಲಿ ಮಾತ್ರ ಹುಟ್ಟಿದವರು ಆರ್ಯರು ಅಥವಾ ಹಿಂದೂಗಳು ಅಲ್ಲ; ಎಲ್ಲರೂ ಇರಾನಿನ ಪ್ರದೇಶಗಳಿಂದ ವಲಸೆ ಬಂದವರೇ” ಎಂದು ಹೇಳಿದರು.

ವಲಸೆ ಮಾದರಿಗಳನ್ನು ವಿವರಿಸಿದ ಅವರು, ಯಾವುದೇ ಸಮುದಾಯಕ್ಕೂ ಈ ಭೂಮಿಯ ಮೇಲೆ ವಿಶೇಷ ಮಾಲೀಕತ್ವವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದರು. “ದ್ರಾವಿಡರೂ ಮೂಲತಃ ಇಲ್ಲಿಯವರಲ್ಲ; ಅವರು ಆಫ್ರಿಕಾದಿಂದ ಇರಾನ್ ಮೂಲಕ ಭಾರತಕ್ಕೆ ಬಂದರು. ಆರ್ಯರು ಕ್ರಿ.ಪೂ. 2000ರ ವೇಳೆಗೆ ಬಂದು ಪ್ರದೇಶಗಳನ್ನು ವಶಪಡಿಸಿಕೊಂಡು ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿದರು. ಹೀಗೆ ವಲಸೆ ಬಂದ ದ್ರಾವಿಡರು ಇಂದು ದಕ್ಷಿಣ ಭಾರತದಲ್ಲಿ ವಾಸಿಸುತ್ತಿದ್ದಾರೆ” ಎಂದು ವಿವರಿಸಿದರು.

ಈ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಪ್ರಶ್ನಿಸಿದ ಅವರು, “ಕ್ರಿ.ಪೂ. 2000ರಲ್ಲಿ ಬಂದವರು ಈಗ ಎಲ್ಲ ‘ವಿದೇಶಿಯರು’ ಹಿಂತಿರುಗಬೇಕು ಎನ್ನುತ್ತಿದ್ದಾರೆ. ಯಾರು ಹಿಂದಿರುಗಬೇಕು? ಆರ್ಯರು ಆರಂಭಿಕ ವಲಸಿಗರು; ಅವರಿಗಿಂತ ಮೊದಲು ದ್ರಾವಿಡರು” ಎಂದು ಮಾರ್ಮಿಕವಾಗಿ ನುಡಿದರು.

ಕ್ರೈಸ್ತರು ಮತ್ತು ಮುಸ್ಲಿಮರು ‘ಹೊರಗಿನವರು’ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ ಅವರು, “ಇಲ್ಲಿನ ಕ್ರೈಸ್ತರು ಇಲ್ಲಿಯೇ ಹುಟ್ಟಿ ಬೆಳೆದವರು; ಕ್ರಿ.ಶ. 52ರಿಂದಲೇ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ. ಅವರು ಈ ದೇಶದ ನಾಗರಿಕರು. ಇಲ್ಲಿನ ಮುಸ್ಲಿಮರೂ ಇಲ್ಲಿಯೇ ಹುಟ್ಟಿ ಬೆಳೆದವರು. ಆದ್ದರಿಂದ ಇಸ್ಲಾಂ ಧರ್ಮಕ್ಕೂ, ಕ್ರೈಸ್ತ ಧರ್ಮಕ್ಕೂ, ಹಿಂದೂ ಧರ್ಮಕ್ಕೂ ಇಲ್ಲಿ ಸಮಾನ ಅಸ್ತಿತ್ವದ ಹಕ್ಕಿದೆ” ಎಂದು ಹೇಳಿದರು.

ಕ್ರೈಸ್ತರ ಮೇಲಿನ ದಾಳಿಗಳ ವಿರುದ್ಧ ಕೇಂದ್ರ ಸರ್ಕಾರ ತೋರಿಸುತ್ತಿರುವ ನಿಷ್ಕ್ರಿಯತೆಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, “ಹಿಂಸಾಚಾರವನ್ನು ಖಂಡಿಸದೆ ಅಥವಾ ನಿಯಂತ್ರಿಸದೆ ಮೌನವಾಗಿರುವುದು, ಅಲ್ಪಸಂಖ್ಯಾತರು ಸುಮ್ಮನಿರುತ್ತಾರೆ ಎಂಬ ಭಾವನೆಯನ್ನು ಹುಟ್ಟಿಸುತ್ತದೆ. ಇದನ್ನು ಖಂಡಿಸದಿದ್ದರೆ ಅಥವಾ ನಿಯಂತ್ರಿಸದಿದ್ದರೆ, ಅದು ನಾವು ಅನುಮೋದಿಸಿದಂತಾಗುತ್ತದೆ ಎಂಬ ಸಂದೇಶ ಸಮಾಜಕ್ಕೆ ಹೋಗುತ್ತದೆ” ಎಂದು ಹೇಳಿದರು.

ಈ ಭಾಷಣವು ಚರ್ಚ್ ಮುಖ್ಯಸ್ಥರ ನಿಲುವಿನಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಈ ಹಿಂದೆ ಅವರು ಕೇಂದ್ರ ಸರ್ಕಾರದ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಏಪ್ರಿಲ್ 2023ರಲ್ಲಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಭೇಟಿಯ ವೇಳೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವರು ಸ್ವಾಗತಿಸಿದ್ದರು. ಕೆಲವು ಪ್ರದೇಶಗಳಲ್ಲಿ ಕ್ರೈಸ್ತ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಸೀಮಿತ ಹಾಗೂ ಸ್ಥಳೀಯವಾಗಿವೆ ಎಂದೂ ಅವರು ಹೇಳಿದ್ದರು. ಆ ಸಂದರ್ಭದಲ್ಲಿ ಸರ್ಕಾರದೊಂದಿಗೆ ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದರು.

ಸೌಜನ್ಯ: thenewsminute.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News