×
Ad

ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅಮೆರಿಕದ ನಿಧಿ ಆರೋಪ ; ಶ್ವೇತಪತ್ರ ಹೊರಡಿಸುವಂತೆ ಸರಕಾರಕ್ಕೆ ಕಾಂಗ್ರೆಸ್ ಆಗ್ರಹ

Update: 2025-02-20 20:13 IST

PC : PTI 

ಹೊಸದಿಲ್ಲಿ: ಭಾರತೀಯ ಚುನಾವಣೆಯಲ್ಲಿ ಬೇರೆ ಯಾರನ್ನೋ ಆಯ್ಕೆ ಮಾಡಲು 21 ಮಿಲಿಯ ಡಾಲರ್ ನೆರವನ್ನು ಉಪಯೋಗಿಸಿರುವ ಸಾಧ್ಯತೆ ಇದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು, ಅಮೆರಿಕದ ಆರ್ಥಿಕ ನೆರವಿನ ಬಗ್ಗೆ ಕೇಂದ್ರ ಸರಕಾರವು ಶ್ವೇತಪತ್ರವೊಂದನ್ನು ಹೊರಡಿಸಬೇಕು ಎಂದು ಆಗ್ರಹಿಸಿದೆ. ಟ್ರಂಪ್‌ ರ ಹೇಳಿಕೆಗಳು ‘‘ಅತ್ಯಂತ ಅಸಂಬದ್ಧ’’ ಎಂಬುದಾಗಿಯೂ ಅದು ಬಣ್ಣಿಸಿದೆ.

‘‘ಇಂದಿನ ದಿನಗಳಲ್ಲಿ ಯುಎಸ್‌ಏಡ್ ಭಾರೀ ಸುದ್ದಿಯಲ್ಲಿದೆ. ಅದನ್ನು 1961 ನವೆಂಬರ್ 3ರಂದು ಸ್ಥಾಪಿಸಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಹೇಳಿಕೆಗಳು ಅತ್ಯಂತ ಅಸಂಬದ್ಧ ಎಂದಷ್ಟೇ ಹೇಳಬಹುದಾಗಿದೆ. ಹಾಗಿದ್ದರೂ, ಭಾರತದ ಸರಕಾರಿ ಮತ್ತು ಸರಕಾರೇತರ ಎರಡೂ ಸಂಸ್ಥೆಗಳಿಗೆ ದಶಕಗಳಿಂದ ನೀಡಲಾಗಿರುವ ಯುಎಸ್‌ಏಡ್ ನೆರವಿನ ವಿವರಗಳನ್ನು ಒಳಗೊಂಡ ಶ್ವೇತಪತ್ರವೊಂದನ್ನು ಭಾರತ ಸರಕಾರವು ಎಷ್ಟು ಸಾಧ್ಯವೋ ಅಷ್ಟು ಬೇಗ ಹೊರತರಬೇಕು’’ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದರು.

‘‘ಭಾರತದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ನಾವು ಯಾಕೆ 21 ಮಿಲಿಯ ಡಾಲರ್ (ಸುಮಾರು 182 ಕೋಟಿ ರೂಪಾಯಿ) ಖರ್ಚು ಮಾಡಬೇಕು? ಭಾರತೀಯ ಚುನವಣೆಯಲ್ಲಿ ಬೇರೆ ಯಾರೋ ಆಯ್ಕೆಗೊಳ್ಳುವಂತೆ ಮಾಡಲು ಅವರು ಪ್ರಯತ್ನಿಸುತ್ತಿದ್ದರು ಎಂದು ಅನಿಸುತ್ತದೆ. ನಾವು ಇದನ್ನು ಭಾರತ ಸರಕಾರಕ್ಕೆ ಹೇಳಲೇಬೇಕಾಗಿದೆ. ಇದೊಂದು ನಾವು ಕಂಡುಕೊಂಡ ದೊಡ್ಡ ವಿಷಯವಾಗಿದೆ’’ ಎಂದು ಮಯಾಮಿಯಲ್ಲಿ ಗುರುವಾರ ನಡೆದ ಎಫ್‌ಐಐ ಆದ್ಯತಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಟ್ರಂಪ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಹಿಂದಿನ ಜೋ ಬೈಡನ್ ಆಡಳಿತವು ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿತ್ತು ಎಂಬುದಾಗಿಯೂ ಟ್ರಂಪ್ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News