ಭಾರತ-ಅಸಿಯಾನ್ ಸಾಂಸ್ಕೃತಿಕ ಪಾಲುದಾರರು: ಪ್ರಧಾನಿ ಮೋದಿ
47ನೇ ಅಸಿಯಾನ್ ಶೃಂಗಸಭೆಯನ್ನುದ್ದೇಶಿಸಿ ಮೋದಿ ವಿಡಿಯೋ ಕಾನ್ಫರೆನ್ಸ್ ಭಾಷಣ
ಪ್ರಧಾನಿ ಮೋದಿ |Photo Credit : PTI
ಹೊಸದಿಲ್ಲಿ,ಅ.26: ಭಾರತ ಹಾಗೂ ಆಸಿಯಾನ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ಕೇವಲ ವ್ಯಾಪಾರದಲ್ಲಿ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಪಾಲುದಾರರಾಗಿವೆ ಎಂದು ಪ್ರಧಾನಿ ಮೋದಿ ರವಿವಾರ ಬಣ್ಣಿಸಿದ್ದಾರೆ. ಕೌಲಾಲಂಪುರದಲ್ಲಿ ರವಿವಾರ ಆರಂಭಗೊಂಡ 47ನೇ ಆಸಿಯಾನ್ ಶೃಂಗಸಭೆಯನ್ನುದ್ದೇಶಿಸಿ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಭಾಷಣ ಮಾಡಿದ ಅವರು, ಇಂಡೊ-ಫೆಸಿಫಿಕ್ ಹಾಗೂ ಆಗ್ನೇಯ ಏಶ್ಯದ ರಾಷ್ಟ್ರಗಳ ಜೊತೆ ರಾಜಕೀಯ, ಆರ್ಥಿಕ ಹಾಗೂ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಉದ್ದೇಶ ಹೊಂದಿರುವ ಭಾರತದ ‘ಆ್ಯಕ್ಟ್ ಈಸ್ಟ್’ ನೀತಿಗೆ ಆಸಿಯಾನ್ ಆಧಾರ ಸ್ತಂಭವಾಗಿದೆ ಎಂದವರು ಹೇಳಿದರು. ಭಾರತವು ಅಸಿಯಾನ್‌ನ ಕೇಂದ್ರೀಯತೆ ಹಾಗೂ ಅದರ ಬಾಹ್ಯನೋಟವನ್ನು ಬೆಂಬಲಿಸುತ್ತದೆ ಎಂದರು.
ಥೈಲ್ಯಾಂಡ್‌ನ ರಾಜಮಾತೆ ಸಿರಿಕಿಟ್ ಅವರ ನಿಧನಕ್ಕೆ ಪ್ರಧಾನಿಯವರು ತನ್ನ ಭಾಷಣದಲ್ಲಿ ಸಂತಾಪ ವ್ಯಕ್ತಪಡಿಸಿದರು. ಯಾವುದೇ ವಿಪತ್ತಿನ ಸಮಯದಲ್ಲಿ ಭಾರತವು ಅಸಿಯಾನ್ ಮಿತ್ರ ರಾಷ್ಟ್ರಗಳ ಜೊತೆ ನಿಲ್ಲುತ್ತಲೇ ಬಂದಿದೆ. ಸಾಗರ ಭದ್ರತೆ, ನೀಲ ಆರ್ಥಿಕತೆ (ಮತ್ಯೋದ್ಯಮ, ಹಡಗುಗಾರಿಕೆ ಸಹಿತ ಸಮುದ್ರ ಸಂಬಂಧಿತ ಆರ್ಥಿಕ ಚಟುವಟಿಕೆಗಳು) ನಮ್ಮ ಸಹಕಾರವು ತ್ವರಿತವಾಗಿ ಹೆಚ್ಚುತ್ತಲೇ ಬಂದಿದೆ.ಇವೆಲ್ಲವನ್ನು ದೃಷ್ಟಿಯಲ್ಲಿರಿಸಿಕೊಂಡು 2026ನೇ ಇಸವಿಯನ್ನು ಅಸಿಯಾನ್-ಭಾರತ ಸಾಗರಯಾನ ಸಹಕಾರ ವರ್ಷವೆಂದು ನಾವು ಘೋಷಿಸುತ್ತಿದ್ದೇವೆ. ಭಾರತ ಹಾಗೂ ಅಸಿಯಾನ್ ರಾಷ್ಟ್ರಗಳ ಸಾಂಸ್ಕೃತಿಕ ಪರಂಪರೆ ಹಾಗೂ ಜನರ ನಡುವೆ ಸಂಪರ್ಕವನ್ನು ಕಾಪಾಡಲು, ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದು ಮೋದಿ ಕರೆ ನೀಡಿದರು.
ಅಸಿಯಾನ್ ರಾಷ್ಟ್ರಗಳ ಜೊತೆ ಕೈಜೋಡಿಸಲು ತನಗೆ ಅವಕಾಶ ಮಾಡಿಕೊಟ್ಟಿದ್ದುದಕ್ಕಾಗಿ ಮಲೇಶ್ಯ ಪ್ರಧಾನಿ, ಅಸಿಯಾನ್ ಒಕ್ಕೂಟದ ಹಾಲಿ ಅಧ್ಯಕ್ಷ ಅನ್ವರ್ ಇಬ್ರಾಹೀಂ ಅವರನ್ನು ಮೋದಿ ತನ್ನ ಭಾಷಣದಲ್ಲಿ ಅಭಿನಂದಿಸಿದರು.
ಬ್ರೂನೈ ದಾರುಸ್ಸಲಾಮ್, ಬರ್ಮಾ, ಇಂಡೊನೇಶ್ಯ, ಲಾವೋಸ್, ಮಲೇಶ್ಯ , ಫಿಲಿಪ್ಪೀನ್ಸ್, ಸಿಂಗಾಪುರ, ಥೈಲ್ಯಾಂಡ್, ವಿಯೆಟ್ನಾಮ್ ಅಸಿಯಾನ್‌ನ ಸದಸ್ಯರಾಷ್ಟ್ರಗಳಾಗಿವೆ.