×
Ad

ʼಆಪರೇಷನ್ ಸಿಂಧುʼ ಕಾರ್ಯಾಚರಣೆ: ಸಂಘರ್ಷಪೀಡಿತ ಇರಾನ್ ನಿಂದ 1,117 ಮಂದಿ ಭಾರತೀಯರು ವಾಪಸ್

Update: 2025-06-22 15:05 IST

Photo credit: PTI

ಹೊಸದಿಲ್ಲಿ: ‘ಆಪರೇಷನ್ ಸಿಂಧು’ ಕಾರ್ಯಾಚರಣೆಯಡಿ ಸಂಘರ್ಷ ಪೀಡಿತ ಇರಾನ್ ನಿಂದ ಇಲ್ಲಿಯವರೆಗೆ 1,117 ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆ ತರಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಶನಿವಾರ ರಾತ್ರಿ (ಜೂನ್ 21) 11.30ಕ್ಕೆ ಮಶ್ಹದ್ ನಿಂದ ಹೊಸದಿಲ್ಲಿಗೆ ವಿಶೇಷ ವಿಮಾನ ಬಂದಿಳಿಯಿತು. ಈ ವಿಮಾನದಲ್ಲಿ 290 ಮಂದಿ ಭಾರತೀಯ ಪ್ರಜೆಗಳು ಇರಾನ್ ನಿಂದ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ” ಎಂದು ತಿಳಿಸಿದ್ದಾರೆ.

“ಇದರೊಂದಿಗೆ ಈವರೆಗೆ ಒಟ್ಟು 1,117 ಭಾರತೀಯ ಪ್ರಜೆಗಳನ್ನು ಇರಾನ್ ನಿಂದ ಮರಳಿ ಕರೆತರಲಾಗಿದೆ” ಎಂದು ಅವರು ಹೇಳಿದ್ದಾರೆ.

ಸ್ವದೇಶಕ್ಕೆ ಮರಳಿರುವ ಭಾರತೀಯ ಪ್ರಜೆಗಳ ಪೈಕಿ ವಿದ್ಯಾರ್ಥಿಗಳೂ ಸೇರಿದ್ದಾರೆ. ತವರಿಗೆ ಸುರಕ್ಷಿತವಾಗಿ ಮರಳಿರುವ ಅವರೆಲ್ಲ, ಭಾರತ ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಈ ನಡುವೆ, ಇರಾನ್ ಹಾಗೂ ಇಸ್ರೇಲ್ ನಡುವೆ ಉಲ್ಬಣಿಸಿರುವ ಸಂಘರ್ಷದಿಂದಾಗಿ, ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಹೀಗಾಗಿ, ಇರಾನ್ ನಿಂದ ಭಾರತೀಯರನ್ನು ಕರೆ ತರಲು ಭಾರತ ಸರಕಾರ ‘ಆಪರೇಷನ್ ಸಿಂಧು’ ಕಾರ್ಯಾಚರಣೆಗೆ ಚಾಲನೆ ನೀಡಿತ್ತು. ಅಲ್ಲದೆ, ಈ ಕಾರ್ಯಾಚರಣೆಗೆ ಸಮಾನಾಂತರವಾಗಿ ಇಸ್ರೇಲ್ ನಿಂದಲೂ ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆ ತರುವ ಕ್ರಮಕ್ಕೆ ಚಾಲನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News