ಕ್ರೀಡೆಗೆ ಬದ್ಧರಾಗಿರಿ: ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿನ ರಾಜಕೀಯ ಹಸ್ತಕ್ಷೇಪದ ವಿರುದ್ಧ ಕಪಿಲ್ ದೇವ್ ವಾಗ್ದಾಳಿ
PC | PTI
"ಈಗಿನ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಪ್ರತಿಭಾ ಕೊರತೆಯಿದೆ" ಎಂದ 1983ರ ವಿಶ್ವಕಪ್ ಚಾಂಪಿಯನ್ ಕ್ಯಾಪ್ಟನ್
ಹೊಸದಿಲ್ಲಿ: “ನಾವು ಕ್ರೀಡೆಗೆ ಬದ್ಧರಾಗಿರಬೇಕು. ಇದು ತುಂಬಾ ಒಳ್ಳೆಯದು” ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಕಿವಿಮಾತು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಏಶ್ಯ ಕಪ್ ಫೈನಲ್ ಪಂದ್ಯ ಅಂತ್ಯಗೊಂಡ ನಂತರ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಶ್ಯ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿದ್ದರಿಂದ ವಿವಾದ ಭುಗಿಲೆದ್ದಿತ್ತು. ಈ ವಿಷಯವನ್ನು ಫೈನಲ್ ಪಂದ್ಯ ಪ್ರಾರಂಭಗೊಳ್ಳುವುದಕ್ಕೂ ಮುನ್ನವೇ ಭಾರತ ತಂಡವು ಏಶ್ಯ ಕ್ರಿಕೆಟ್ ಮಂಡಳಿಗೆ ತಿಳಿಸಿತ್ತು. ಆದರೆ, ಈ ಘಟನೆಯಿಂದ ಆಕ್ರೋಶಗೊಂಡ ಮೊಹ್ಸಿನ್ ನಖ್ವಿ ಟ್ರೋಫಿಯೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಹೊರ ನಡೆದಿದ್ದರು. ಈ ಘಟನೆಯ ಕುರಿತು ಜಗತ್ತಿನಾದ್ಯಂತ ಟೀಕೆ ವ್ಯಕ್ತವಾಗಿರುವ ಬೆನ್ನಿಗೇ ಮಾಜಿ ಭಾರತೀಯ ಕ್ರಿಕೆಟಿಗ ಕಪಿಲ್ ದೇವ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.
India Today ಸುದ್ದಿ ಸಂಸ್ಥೆಯೊಂದಿಗೆ ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಪಿಲ್ ದೇವ್, “ನಾವು ರಾಜಕೀಯ ಮಗ್ಗುಲಿನಲ್ಲಿ ನೋಡುವ ಬದಲು ಕ್ರೀಡಾ ಮಗ್ಗುಲಿನಿಂದ ನೋಡುವುದು ಇಡೀ ಮಾಧ್ಯಮದ ಜವಾಬ್ದಾರಿಯಾಗಿದೆ. ಹೌದು, ಎಲ್ಲ ವಿಷಯಗಳನ್ನೂ ಚರ್ಚಿಸುವುದು ಮಾಧ್ಯಮದ ಜವಾಬ್ದಾರಿಯಾಗಿದೆ. ಆದರೆ, ಓರ್ವ ಕ್ರೀಡಾಪಟುವಾಗಿ ನಾವು ಕ್ರೀಡೆಗೆ ಬದ್ಧವಾಗಿರಬೇಕು ಎಂದು ಬಯಸುತ್ತೇನೆ. ಇದು ತುಂಬಾ ಒಳ್ಳೆಯದು” ಎಂದು ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ನ ಹಾಲಿ ಸ್ಥಿತಿಯ ಕುರಿತೂ ಪ್ರತಿಕ್ರಿಯಿಸಿದ ಕಪಿಲ್ ದೇವ್, ಹಾಲಿ ಪಾಕಿಸ್ತಾನ ತಂಡವು ವಿಶ್ವ ದರ್ಜೆ ಪ್ರತಿಭೆಯ ಕೊರತೆ ಎದುರಿಸುತ್ತಿದೆ ಎಂದು 1980 ಹಾಗೂ 1990ರ ದಶಕದ ಪಾಕಿಸ್ತಾನ ತಂಡದ ಸುವರ್ಣ ಯುಗವನ್ನು ಹೋಲಿಕೆ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನಿಜ, 1980, 1990 ಅಥವಾ ಅದಕ್ಕೂ ಹಿಂದೆ ಪಾಕಿಸ್ತಾನ ತಂಡದಲ್ಲಿದ್ದ ಆಟಗಾರರ ಪ್ರತಿಭೆಗೆ ಹೋಲಿಸಿದರೆ ಈಗಿನ ಆಟಗಾರರಿಗೆ ಅಂತಹ ಪ್ರತಿಭೆಯಿಲ್ಲ. ಪಾಕಿಸ್ತಾನ ನಮಗೆ ಹಾಗೂ ಜಗತ್ತಿಗೆ ಅತ್ಯುತ್ತಮ ಕ್ರಿಕೆಟಿಗರನ್ನು ಕೊಡುಗೆ ನೀಡಿದೆ. ನೀವು ಇಮ್ರಾನ್ ಖಾನ್, ಜಾವೇದ್ ಮಿಯಾಂದಾದ್, ಝಹೀರ್ ಅಬ್ಬಾಸ್, ವಾಸೀಂ ಅಕ್ರಂ ಹಾಗೂ ವಾಕರ್ ಯೂನಿಸ್ ರಂತಹ ಆಟಗಾರರ ಕುರಿತು ಮಾತನಾಡಬಹುದು. ಆದರೆ, ದುರದೃಷ್ಟವಶಾತ್, ಈ ಹಿಂದೆ ಪಾಕಿಸ್ತಾನ ತಂಡದಲ್ಲಿದ್ದ ಆಟಗಾರರ ಪ್ರತಿಭೆಗೆ ಹೋಲಿಸಿದರೆ, ಶೇ. 1ರಷ್ಟು ಪ್ರತಿಭಾವಂತರೂ ಇಲ್ಲ” ಎಂದೂ ಅವರು ಹೇಳಿದ್ದಾರೆ.