ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ 151ನೇ ಸ್ಥಾನ; ಏಕಸ್ವಾಮ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ವರದಿ
Photo: Development News
ಹೊಸದಿಲ್ಲಿ: 2025ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 180 ದೇಶಗಳ ಪೈಕಿ 151ನೇ ಸ್ಥಾನಕ್ಕೇರಿದೆ. 2024ರ ಸೂಚ್ಯಂಕದಲ್ಲಿ 159ನೇ ಸ್ಥಾನದಲ್ಲಿತ್ತು. ಪ್ರಜಾಸತ್ತಾತ್ಮಕ ಆಡಳಿತಕ್ಕಾಗಿ ಅಂತರರಾಷ್ಟ್ರೀಯ ಲಾಭರಹಿತ ಸಂಸ್ಥೆಯಾಗಿರುವ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಡಬ್ಲ್ಯುಬಿ) ವಿಶ್ವಾದ್ಯಂತ ಹೆಚ್ಚಿನ ಮಾಧ್ಯಮ ಸಂಸ್ಥೆಗಳಿಗೆ ಆರ್ಥಿಕ ಒತ್ತಡವು ಪ್ರಮುಖ ಕಳವಳವಾಗಿದೆ ಎಂದು ಎಚ್ಚರಿಕೆಯನ್ನು ನೀಡಿದೆ.
ಸೂಚ್ಯಂಕದಲ್ಲಿ ಎರಿಟ್ರಿಯಾ ಅತ್ಯಂತ ಕೆಳಸ್ಥಾನದಲ್ಲಿದ್ದರೆ ನಾರ್ವೆ ಅಗ್ರಸ್ಥಾನದಲ್ಲಿದೆ. ಭೂತಾನ್, ಪಾಕಿಸ್ತಾನ, ಟರ್ಕಿ, ಫೆಲೆಸ್ತೀನ್, ರಶ್ಯಾ, ಅಫ್ಘಾನಿಸ್ತಾನ, ಸಿರಿಯಾ ಮತ್ತು ಉತ್ತರ ಕೊರಿಯಾ ಭಾರತಕ್ಕಿಂತ ಕೆಳಗಿನ ಸ್ಥಾನಗಳಲ್ಲಿವೆ.
151ನೇ ಸ್ಥಾನದಲ್ಲಿರುವ ಭಾರತವು ಕಳೆದೆರಡು ವರ್ಷಗಳಿಂದ ಸೂಚ್ಯಂಕದಲ್ಲಿ ಕುಸಿಯುತ್ತಲೇ ಇದೆ. 2019ರಲ್ಲಿ 140ನೇ ಸ್ಥಾನವನ್ನು ಹೊಂದಿದ್ದ ಅದು 2020 ಮತ್ತು 2021ರಲ್ಲಿ 142ನೇ ಸ್ಥಾನಕ್ಕೆ,2022ರಲ್ಲಿ 150ನೇ ಮತ್ತು 2023ರಲ್ಲಿ 161ನೇ ಸ್ಥಾನಕ್ಕೆ ಕುಸಿದಿತ್ತು. ನೆರೆಯ ಪಾಕಿಸ್ತಾನವು 2022ರಲ್ಲಿ 157ನೇ ಮತ್ತು 2013ರಲ್ಲಿ 150ನೇ ಸ್ಥಾನವನ್ನು ಹೊಂದಿದ್ದು, ಈಗ 158 ಸ್ಥಾನಕ್ಕೆ ಕುಸಿದಿದೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ರಾಜಕೀಯ ದಿಗ್ಗಜರ ಕೈಗಳಲ್ಲಿ ಮಾಧ್ಯಮ ಒಡೆತನದ ಕೇಂದ್ರೀಕರಣವು ಮಾಧ್ಯಮ ಬಹುತ್ವಕ್ಕೆ ಅಪಾಯವನ್ನುಂಟು ಮಾಡುತ್ತದೆ ಮತ್ತು ಕೆಲವರ ಬಳಿ ನಿಯಂತ್ರಣವನ್ನು ಕ್ರೋಡೀಕರಿಸುತ್ತದೆ ಎಂದು ವರದಿಯು ಹೇಳಿದೆ.
ಭಾರತ, ಲೆಬನಾನ್(132), ಆರ್ಮೆನಿಯಾ(34) ಮತ್ತು ಬಲ್ಗೇರಿಯಾ(70)ಗಳಲ್ಲಿ ಅನೇಕ ಮಾಧ್ಯಮ ಸಂಸ್ಥೆಗಳು ತಮ್ಮ ಉಳಿವಿಗೆ ರಾಜಕೀಯ ಅಥವಾ ವ್ಯವಹಾರ ಪ್ರಪಂಚಕ್ಕೆ ನಿಕಟವಾಗಿರುವ ವ್ಯಕ್ತಿಗಳಿಂದ ಷರತ್ತುಬದ್ಧ ಹಣಕಾಸು ನೆರವನ್ನು ಅವಲಂಬಿಸಿವೆ ಎಂದು ವರದಿಯು ಬೆಟ್ಟು ಮಾಡಿದೆ.
ಸೂಚ್ಯಂಕದಲ್ಲಿ ಭಾರತಕ್ಕಿಂತ ಕೆಳಗಿರುವ ಏಕಪಕ್ಷ ಆಡಳಿತ ಮತ್ತು ಸರ್ವಾಧಿಕಾರಗಳಲ್ಲಿ ಉತ್ತರ ಕೊರಿಯಾ(179), ಚೀನಾ(178), ವಿಯೆಟ್ನಾಂ(173) ಮತ್ತು ಮ್ಯಾನ್ಮಾರ್(169)ಸೇರಿವೆ.
ಸೂಚ್ಯಂಕಕ್ಕಾಗಿ ಸಂಗ್ರಹಿಸಲಾದ ಮಾಹಿತಿಗಳ ಪ್ರಕಾರ,180 ದೇಶಗಳ ಪೈಕಿ 160 ದೇಶಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿದ್ದು, ಈ ದೇಶಗಳಲ್ಲಿ ಮಾಧ್ಯಮ ಸಂಸ್ಥೆಗಳು ‘ಕಷ್ಟ’ದಿಂದ ಹಣಕಾಸು ಸ್ಥಿರತೆಯನ್ನು ಸಾಧಿಸಿವೆ ಅಥವಾ ‘ಸ್ಥಿರತೆಯನ್ನೇ ಸಾಧಿಸಿಲ್ಲ’. ಅಮೆರಿಕ(57),ಟ್ಯುನಿಷಿಯಾ(129) ಮತ್ತು ಅರ್ಜೆಂಟೀನಾ (87) ಸೇರಿದಂತೆ ವಿಶ್ವದ ಮೂರನೇ ಒಂದು ಭಾಗದಷ್ಟು ದೇಶಗಳಲ್ಲಿ ಆರ್ಥಿಕ ಸಂಕಷ್ಟಗಳಿಂದಾಗಿ ಮಾಧ್ಯಮ ಸಂಸ್ಥೆಗಳು ಮುಚ್ಚಲ್ಪಡುತ್ತಿವೆ ಎಂದು ವರದಿಯು ಎಚ್ಚರಿಕೆ ನೀಡಿದೆ.
ವರದಿಯ ಪ್ರಕಾರ ಮಧ್ಯ ಪ್ರಾಚ್ಯ-ಉತ್ತರ ಆಫ್ರಿಕಾ ಪ್ರದೇಶವು ವಿಶ್ವದಲ್ಲಿಯೇ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ಇಸ್ರೇಲ್ ಸೇನೆಯು ಗಾಝಾದಲ್ಲಿ ಪತ್ರಿಕೋದ್ಯಮದ ಸಾಮೂಹಿಕ ವಿನಾಶವನ್ನುಂಟು ಮಾಡಿದೆ. ಖತರ್(79)ನ್ನು ಹೊರತುಪಡಿಸಿ ಈ ಪ್ರದೇಶದಲ್ಲಿಯ ಪ್ರತಿಯೊಂದೂ ದೇಶವು ಕಠಿಣ ಅಥವಾ ಅತ್ಯಂತ ಗಂಭೀರ ಪತ್ರಿಕಾ ಸ್ವಾತಂತ್ರ್ಯ ಸ್ಥಿತಿಯಲ್ಲಿದೆ. ಪತ್ರಿಕಾ ಮಾಧ್ಯಮವು ಸರ್ವಾಧಿಕಾರಿ ಆಡಳಿತಗಳು ಮತ್ತು ನಿರಂತರ ಆರ್ಥಿಕ ಅನಿಶ್ಚಿತತೆಗಳ ನಡುವೆ ಸಿಕ್ಕಿ ಹಾಕಿಕೊಂಡಿದೆ ಎಂದು ವರದಿಯು ಹೇಳಿದೆ.
ಉತ್ತಮ ಶ್ರೇಯಾಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ(27) ಮತ್ತು ನ್ಯೂಝಿಲ್ಯಾಂಡ್(16)ನಂತಹ ದೇಶಗಳು ಸಹ ಸವಾಲುಗಳಿಂದ ಮುಕ್ತವಾಗಿಲ್ಲ ಎಂದು ವರದಿಯು ತಿಳಿಸಿದೆ.